Times of Deenabandhu
ಅಂಕಣ ದೇಶ ನಮ್ಮ ವಿಶೇಷ ಮುಖ್ಯಾಂಶಗಳು

ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದಿದ್ದು ಹೇಗೆ?

ದತ್ತಾತ್ರೇಯ ಹೆಗಡೆ

ಜನರನ್ನು ಅರ್ಥಮಾಡಿಕೊಳ್ಳಬಲ್ಲವ ಮತ್ತು ಸಮಾಜವನ್ನು ಕಟ್ಟುವ ದೂರದೃಷ್ಟಿ ಇರುವವನು ಮಾತ್ರ ಜನನಾಯಕನಾಗಬಲ್ಲ. ದೇವರು, ಧರ್‍ಮ, ದೇಶಭಕ್ತಿಯನ್ನೇ ಮುಖ್ಯವಾಗಿಟ್ಟುಕೊಂಡು ವ್ಯಕ್ತಿನಿಂದನೆ ಮಾಡುತ್ತಾ, ಜನರ ಹಿತ, ಇರುವ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಇತಿಹಾಸದ ಪಾಠ ಸೇರುತ್ತಾನೆ. ಜನನಾಯಕನಿಗೆ ಜನರ ಅವಶ್ಯಕತೆಯೇ ಧರ್‍ಮವಾಗಬೇಕು. ಅಂತಹವನು ಮಾತ್ರ ಎಲ್ಲರ ಹೃದಯ ಗೆಲ್ಲಬಲ್ಲ.

೨೦೧೭ರ ದೆಹಲಿಯ ಮುನ್ಸಿಪಲ್ ಚುನಾವಣೆ ಮತ್ತು ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮೊನ್ನೆಯ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಎನ್ನುವಂತಹ ಗೆಲುವು ಸಾಧಿಸಿದ್ದು, ಆ ಪಕ್ಷದ ಸಾಧನೆಯನ್ನು ಎಲ್ಲರೂ ಮೆಚ್ಚುವಂತೆ ಮಾಡಿದೆ.
ದೆಹಲಿಯಲ್ಲಿ ರಾಷ್ಟ್ರೀಯ ರಾಜಕೀಯಕ್ಕೆ ಸೋಲಾಗಿದೆ. ಕೇಜ್ರಿವಾಲ್ ಅವರ ಈ ವಿಜಯ ಅವರು ರಾಷ್ಟ್ರೀಯವಾಗಿ ಮಿಂಚಲು ಇನ್ನೊಂದು ಅವಕಾಶವನ್ನು ನೀಡಿದೆ. ೭ ಮಿಲಿಯನ್ ಮತದಾರರು ಮತ್ತು ೭ ಲೋಕಸಭಾ ಸದಸ್ಯರನ್ನು ಹೊಂದಿರುವ ಸಣ್ಣ ರಾಜ್ಯ ದೆಹಲಿ, ಯಾರೂ ಊಹಿಸದ ರೀತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ್ನು ಗುಡಿಸಿಹಾಕಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಆಪ್‌ಗೆ ಭಾರೀ ಸ್ಪರ್ಧೆಯನ್ನೇ ಒಡ್ಡಿತ್ತು. ಜೊತೆಗೆ ಬಿಜೆಪಿ ವಿರುದ್ದ ಆಪ್ ಅಭ್ಯರ್ಥಿಗಳು ಗೆದ್ದ ಮತದ ಅಂತರವೂ ಇಲ್ಲಿ ಗಮನೀಯವಾದದ್ದು.

ಲೋಕಸಭೆ ಚುನಾವಣೆಯಾಗಿ ೯ ತಿಂಗಳೊಳಗೆ ಆಪ್‌ಗೆ ಭರ್ಜರಿ ಬೆಂಬಲವನ್ನು ದೆಹಲಿ ಮತದಾರರು ನೀಡಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆಗೆ ಬುದ್ಧಿವಂತ ಮತದಾರರು ಗಮನಿಸುವ ವಿಚಾರವೇ ಬೇರೆ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಮೊದಲನೆಯ ಬೆಳವಣಿಗೆಯಲ್ಲಿ, ೨೦೧೪ರ ಚುನಾವಣೆಯಲ್ಲಿ ಕೇವಲ ೧೦ ಕ್ಷೇತ್ರವನ್ನು ಮಾತ್ರ ಆಪ್ ವಿಧಾನಸಭೆಯಲ್ಲಿ ಗೆದ್ದಿತ್ತು. ಆಪ್‌ಗೆ ಶೇ. ೩೩ರಷ್ಟು ಮತ ಬಂದರೆ ಬಿಜೆಪಿಗೆ ಶೇ. ೪೬ರಷ್ಟು ಮತ ಬಂದಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ೭ ಸ್ಥಾನ ಬಿಜೆಪಿ ಗೆದ್ದಿದೆ. ಇಲ್ಲಿ ಆಪ್‌ಗೆ ಬಂದಿದ್ದು ಶೇ. ೧೮ರಷ್ಟು ಮಾತ್ರ. ಬಿಜೆಪಿಗೆ ೫೪ರಷ್ಟು ಮತ ಮತ್ತು ಕಾಂಗ್ರೆಸ್‌ಗೆ ೨೨ರಷ್ಟು ಮತ ಚಲಾವಣೆಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಆಪ್‌ನ ಇಬ್ಬರು ಉಮೇದುವಾರರು ಮಾತ್ರ ಎರಡನೆಯ ಸ್ಥಾನದಲ್ಲಿದ್ದರು. ಮೂವರು ಠೇವಣಿಯನ್ನು ಕಳೆದುಕೊಂಡಿದ್ದರು.

ಎರಡನೆಯದಾಗಿ, ೨೦೫ರಲ್ಲಿ ಅಧಿಕಾರಕ್ಕೇರಿದಾಗ ಉತ್ತಮ ಆಡಳಿತದ ಭರವಸೆಯನ್ನು ಕೆಲವೇ ಕ್ಷೇತ್ರದ ಮೇಲೆ ಅದು ನೀಡೀತ್ತು. ವಿದ್ಯುತ್ ದರ, ಉಚಿತ ನೀರು, ಶಾಲೆ ಮತ್ತು ಆರೋಗ್ಯ ಕ್ಷೇತ್ರ, ಮಹಿಳಾ ರಕ್ಷಣೆ ಮಾತ್ರ. ಈ ಎಲ್ಲ ಭರವಸೆಗಳನ್ನು ತಾನು ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅದು ಈಡೇರಿಸಿರುವುದು ಅದರ ಈ ಬಾರಿಯ ಮಹತ್ತರ ಸಾಧನೆಗೆ ಕಾರಣವಾಗಿದೆ.
ಪರೀಕ್ಷೆಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅನುತ್ತಿರ್ಣರಾಗುತ್ತಿದ್ದುದ್ದನ್ನು ಗಮನಿಸಿ ಅವರು ಜಾರಿಗೊಳಿಸಿದ ಶೈಕ್ಷಣಿಕ ಬದಲಾವಣೆಗಳು ಮತ್ತು ಪಾಠ ಪ್ರವಚನದ ಕ್ರಮಗಳು ಸಾಕಷ್ಟು ಫಲ ನೀಡಿದವು. ಶಾಲೆಗಳನ್ನು ಉನ್ನತೀಕರಿಸಿದ್ದಲ್ಲದೆ, ಅಭಿವೃದ್ಧಿಪಡಿಸಿದರು.

ವಿವಿಧ ಬಡಾವಣೆಗಳಲ್ಲಿ ಸಾಕಷ್ಟು ಆರೋಗ್ಯ ಕೇಂದ್ರಗಳನ್ನು ತೆರೆದರು. ಮೂರು ವರ್ಷಗಳಲ್ಲಿ ಆಗಬೇಕಾದ ಈ ಯೋಜನೆ ಒಂದೇ ವರ್ಷದಲ್ಲಿ ಸಾಧನೆಯಾಯಿತು. ಸಂಶೋಧನೆ ಮತ್ತು ಪ್ರಾಮಾಣಿಕವಾಗಿ ಇಲ್ಲಿ ವೈದ್ಯರು ಕೆಲಸ ಮಾಡಲಾರಂಭಿಸಿದರು. ಇದರಿಂದಾಗಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿಗೆ ಬರುತ್ತಿದ್ದ ರೋಗಿಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಯಿತು. ಗುಣಮಟ್ಟದ ಚಿಕಿತ್ಸೆಗೆ ಮತದಾರ ಮಾರುಹೋದನು.

ಕೇಜ್ರಿವಾಲ್ ಅವರ ಸಾಮರ್ಥ್ಯ ಪ್ರಕಟವಾದ್ದೇ ಇಲ್ಲಿ. ಆರೋಗ್ಯ ಮತ್ತು ಶಾಲಾ ವ್ಯವಸ್ಥೆಯೇ ಮತದಾರರನ್ನು ಸೆಳೆಯಿತು. ಆಡಳಿತಶಾಹಿಗಳ ಕೈವಾಡವು ಕಡಿಮೆಯಾಯಿತು. ರಾಷ್ಟ್ರೀಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಪ್ರಧಾನಿ ನರೇಂದ್ರರ ಮೋದಿ ೩೭೦ನೆಯ ವಿಧಿಯನ್ನು ಜಾರಿಗೊಳಿಸಿದರೂ, ನಾಗರಿಕ ತ್ವ ಪಡೆಯುವ ವಿಚಾರವನ್ನು ಘೋಷಿಸಿದರೂ ಕೇಜ್ರಿವಾಲ್ ಮಾತನಾಡಲಿಲ್ಲ. ಪೌರತ್ವ ಕಾಯ್ದೆ ವಿರೋಧಿಸಿ ಸಾಕಷ್ಟು ಹೋರಾಟ, ವಿವಾದ ಉಂಟಾಯಿತಾದರೂ ಕಾರಣವಾದರೂ ಕೇಜ್ರಿವಾಲ್ ಇದ್ಯಾವುದರ ಬಗ್ಗೆಯೂ ತುಟಿ ಬಿಚ್ಚಲಿಲ್ಲ. ಕೇಜ್ರಿವಾಲ್ ಅವರನ್ನು ದೇಶದ್ರೋಹಿ ಎಂದೂ ಸಹ ಬಿಜೆಪಿ ಮುಖಂಡರು ಜರಿದರು.

ರಾಷ್ಟ್ರೀಯ ವಿಚಾರಗಳೊಂದಿಗೆ ಅವರು ರಾಜಿ ಮಾಡಿಕೊಂಡಿದ್ದಾರೆ ಎಂಬ ಅಭಿಪ್ರಾಯ ಬರುವಂತೆ ಇದನ್ನು ಪ್ರಚಾರ ಮಾಡಲಾಯಿತು. ಶಹೀನ್‌ಬಾಗ್ ಧರಣಿ ವಿಚಾರ ಮತ್ತು ಮುಸ್ಲೀಮರಿಗೆ ಸಂಬಂಧಿಸಿಸ ಇನ್ನಿತರ ವಿಚಾರಗಳಲ್ಲೂ ಅವರು ಮೌನ ಮುರಿಯಲಿಲ್ಲ. ಮುಸ್ಲಿಮರಿಗೆ ನೋವಾಗುವಂತೆ ವರ್ತಿಸಲಿಲ್ಲ. ಪರಿಣಾಮವಾಗಿ, ಲೋಕಸಭೆ ಚುನಾವಣೆಯಲ್ಲಿ ಆಪ್‌ನ್ನು ಬೆಂಬಲಿಸದೆ ಕಾಂಗ್ರೆಸ್‌ಗೆ ಮತ ನೀಡಿದ್ದ ಮುಸ್ಲೀಮರು ಈ ಬಾರಿ ಆಪ್ ಪರ ನಿಂತರು. ಮತ ವಿಭಜನೆಯಾಗದ ಕಾರಣ ಬಿಜೆಪಿಗೆ ಭಾರಿ ಪ್ರಮಾಣದ ನಷ್ಟವುಂಟಾಯಿತು. ಕಾಂಗ್ರೆಸ್ ಮುಸ್ಲೀಮರ ಮತ ನೆಚ್ಚಿಕೊಂಡು ದಯನೀಯ ಸ್ಥಿತಿಗಿಳಿಯಿತು.

ಇದರ ಜೊತೆಗೆ ದೆಹಲಿ ಬಿಜೆಪಿ ತನ್ನೆಲ್ಲಾ ಕೇಂದ್ರ ಸಚಿವರನ್ನು ಈ ಬಾರಿ ಪ್ರಚಾರಕ್ಕೆ ಇಳಿಸಿತ್ತು. ದಿನಕ್ಕೆ ಮೂರು-ನಾಲ್ಕು ಪ್ರಚಾರ ಸಭೆಯನ್ನು ಮೋದಿ- ಅಮಿತ್ ಶಾ ನಡೆಸಿದರು. ಕೇಜ್ರಿವಾಲ್ ಅವರನ್ನು ಟೀಕಿಸುವುದೇ ಅವರ ಭಷಣವಾಗಿತ್ತು.ಜೊತೆಗೆ, ಮತದಾರರಿಗೆ ಯಾವ ಹೊಸ ಕಾರ್‍ಯಕ್ರಮವನ್ನೂ ಘೋಷಿಸಲಿಲ್ಲ.
೧೯೯೮ರಿಂದೀಚೆ ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ. ಮೂರು ಕಾರ್ಪೊರೇಶನ್‌ಗಳಲ್ಲಿ ಅಧಿಕಾರದಲ್ಲಿದ್ದರೂ ಸಮರ್ಪಕವಾಗಿ ಜನಮನ ಗೆಲ್ಲುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ಮತ್ತು ಪರಿಣಾಮಕಾರಿಯಲ್ಲದ ಅದರ ಆಳ್ವಿಕೆಯೇ ಅದಕ್ಕೆ ಮುಳುವಾಗಿದೆ. ೨೦೧೪ ಮತ್ತು ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಜನ ಮೋದಿ ಬಗ್ಗೆ ಭರವಸೆ ಇಟ್ಟು ಮತ ಚಲಾಯಿಸಿದಂತೆ ಈ ಬಾರಿಯೂ ಚುನಾಯಿಸುತ್ತಾರೆ ಎಂದೇ ಅದು ತಿಳಿದಿತ್ತು. ಆದರೆ ಹಾಗಾಗಲಿಲ್ಲ.

ಇದೇನೇ ಇರಲಿ, ಕೇಜ್ರಿವಾಲ್ ಮುಂದೆ ಸಾಕಷ್ಟು ಸವಾಲುಗಳಿವೆ. ಸಬ್ಸಿಡಿ ಸಂಸ್ಕೃತಿಯನ್ನು ನಂಬಿಕೊಂಡೇ ಗೆದದುಬಂದಿರುವದುರಿಂದ ಇದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಮುಂದಿರುವ ಪ್ರಶ್ನೆ. ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್‍ಯ ವಿಭಾಗಕ್ಕೆ ಇನ್ನಷ್ಟು ಬಂಡವಾಳ ಹೂಡುವ ಭರವಸೆಯನ್ನು ನೀಡಿದ್ದಾರೆ. ಶೀಲಾ ದೀಕ್ಷಿತ್ ೧೦ ವರ್ಷ ಮುಖ್ಯಮಂತ್ರಿಯಾಗಿದ್ದಾಗ ಸುಮಾರು ೨೦ ಸಾವಿರ ಕೋಟಿ ರೂ. ಸಬ್ಸಿಡಿ ಹಣವನ್ನು ಉಳಿಸಿದ್ದರು. ಆದರೆ ಈಗ ಕೇಜ್ರಿವಾಲ್ ಸಬ್ಸಿಡಿ ಉಳಿಸುವುದಿರಲಿ, ಹಣ ಹೇಗೆ ಹೊಂದಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಕೊನೆಯಲ್ಲಿ:  ಜನರನ್ನು ಒಡೆದಾಳುವ, ಕೇವಲ ರಾಷ್ಟ್ರೀಯ ವಿಚಾರಗಳನ್ನು ಪ್ರಚೋದಿಸುವ ಮೂಲಕ ಮತಗಳಿಸಲು ಎಲ್ಲಾ ಕಾಲದಲ್ಲೂ ಸಾಧ್ಯವಿಲ್ಲ ಎನ್ನುವುದು ಆದಷ್ಟು ಬೇಗ ಬಿಜೆಪಿಗೆ ಮನದಟ್ಟಾದರೆ ಒಳ್ಳೆಯದು. ಯಾವುದೇ ಸರಕಾರ ಜನರನ್ನು ನಿರ್ಲಕ್ಷಿಸಿ ತನ್ನ ಪಕ್ಷದ ಅಜೆಂಡಾವನ್ನೇ ಸ್ಥಾಪಿಸಹೊರಟರೆ ಇತ್ತೀಚಿನ ಸೋಲುಗಳೇ ಫಲಿತಾಂಶ ಮರುಕಳಿಸುತ್ತದೆ. ಏಕನಾಯಕನ ಮೇಲೆ ಅತಿಯಾದ ವಿಶ್ವಾಸ, ಜನಾಂಗವನ್ನೇ ಒಡೆಯುವ ಧಾರ್‍ಮಿಕ ನೀತಿ, ನಿರುದ್ಯೋಗ, ಸಾಮಾಜಿಕ ಸ್ಥಿತಿ-ಗತಿಗಳ ನಿರ್ಲಕ್ಷ್ಯ ನಾಯಕರ ಭ್ರಷ್ಟಾಚಾರ ಎಲ್ಲವೂ ಚುನಾವಣೆಯಲ್ಲಿ ವಿರೋಧಿ ಮತಗಳಾಗಿ ಚಲಾಯಿಸಲ್ಪಡುತ್ತವೆ ಎನ್ನುವುದು ಈ ಹಿಂದೆಯೇ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಸಾಬೀತಾಗಿತ್ತು. ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಕೇವಲ ಖುರ್ಚಿ ಹಿಡಿಯುವುದೇ ಪ್ರಮುಖವಾದರೆ ಸೋಲು ನಿಶ್ಚಿತ ಎನ್ನುವುದನ್ನು ಮಹಾರಾಷ್ಟ್ರ ಮತದಾರರು ತೋರಿಸಿಕೊಟ್ಟಿದ್ದರು. ಆದರೆ ಅದನ್ನೆಲ್ಲ ಮರೆತು ಗೆಲುವಿಗಾಗಿ ಅಡ್ಡದಾರಿ ಹಿಡಿಯುತ್ತ ಹೊರಟರೆ ‘ಚಾಣಕ್ಯ’ನನ್ನೂ ಜನರು ಮೂಲೆಗೆ ತಳ್ಳುತ್ತಾರೆ.

 

ಸ್ಥಳೀಯ ವಿಚಾರ ಮತ್ತು ಸಮಸ್ಯೆಗಳನ್ನು ನಿರ್ಲಕ್ಷಿಸಿ, ಜನರನ್ನು ಭಾವನಾತ್ಮಕವಾಗಿ ಎತ್ತಿಕಟ್ಟಲು ಹೊರಟರೆ ಅದರಿಂದ ಲಾಭದ ಬದಲು ನಷ್ಟವೇ ಹೆಚ್ಚು ಎನ್ನುವುದು ಇತ್ತೀಚಿನ ತಿಂಗಳುಗಳಲ್ಲಿ ಬಿಜೆಪಿಗೆ ಗೊತ್ತಾಗತೊಡಗಿದೆ. ವಿಧಾನಸಭಾ ಚುನಾವಣೆಗಳಲ್ಲೂ ೩೭೦ನೆಯ ವಿಧಿಗೆ ತಿದ್ದುಪಡಿ, ರಾಮಮಂದಿರ ನಿರ್‍ಮಾಣ, ಪೌರತ್ವ ಕಾಯ್ದೆ ಜಾರಿಯೇ ಕೇಂದ್ರ ಸರಕಾರಕ್ಕೆ ಮುಖ್ಯವಾದಂತಿದೆ.

ಮೋದಿ ಎರಡನೆಯ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ನಂತರ ಅವರ ನಡೆ ಹೆಚ್ಚು ಆಕ್ರಮಣಕಾರಿಯಾಗುತ್ತಿದೆ, ಕಲಹಕ್ಕೆ ಎಡೆಮಾಡಿಕೊಡುತ್ತಿದೆ. ಸಾಮಾಜಿಕ ಸುಧಾರಣೆಗಳು ಅತಿಅವಶ್ಯವಿರುವ ಈ ಸಂದರ್ಭದಲ್ಲಿ ಅದನ್ನು ಬಿಟ್ಟು ತಮ್ಮ ಪಕ್ಷದ ವಿಚಾರಧಾರೆಯನ್ನೇ ಮುಂದಿಟ್ಟುಕೊಂಡು ಹೊರಟರೆ ಜನರು ಅದನ್ನು ಒಪ್ಪುವುದಿಲ್ಲ. ಸ್ಥಳೀಯ ನಾಯಕರನ್ನು ನಿರ್ಲಕ್ಷಿಸುವುದು, ಹೋದಲ್ಲೆಲ್ಲ ಕಾಂಗ್ರೆಸ್ ಮುಕ್ತ ಎನ್ನುವ ವಿಚಾರವನ್ನು ಜನರು ತಿರಸ್ಕರಿಸುತ್ತಾರೆ. ಬದಲಾಗಿ ಇವರನ್ನೇ ಅಲ್ಲಿಂದ ಮುಕ್ತರಾಗಿಸುತ್ತಿದ್ದಾರೆ.

ಇತ್ತೀಚಿನ ಬೆಳವಣಿಗೆ ಗಮನಿಸಿ. ಉತ್ತರದ ಪ್ರಮುಖ (ದೊಡ್ಡ) ೫ ರಾಜ್ಯಗಳು ಈಗ ಬಿಜೆಪಿ ಕೈ ತಪ್ಪಿವೆ. ದೆಹಲಿಯೂ ಹೋಯಿತು. ಇವರ ನೀತಿ ವಿಚಾರಧಾರೆಗಳೇ ಇದಕ್ಕೆಲ್ಲ ಕಾರಣವೇ ಹೊರತು ಬೇರೆನಿಲ್ಲ. ಆಳ್ವಿಕೆಯಲ್ಲಿದ್ದ ರಾಜ್ಯದಲ್ಲಿ ಭ್ರಷ್ಟಾಚಾರ, ಅಲ್ಲಿನ ಜನರನ್ನು ಎತ್ತಿಕಟ್ಟುವುದು, ಇಲ್ಲಸಲ್ಲದ ಕಾನೂನನ್ನು ಜನರ ಒಪ್ಪಿಗೆ ಇಲ್ಲದೆಯೇ ಜಾರಿಗೊಳಿಸುವುದು ನಡೆಯುತ್ತಿದೆ. ರಾಮಮಂದಿರ ಕಟ್ಟಿಯೇ ತೀರುತ್ತೇವೆ ಎನ್ನುವುದರಿಂದ ಮತದಾರನಿಗೇನು ಲಾಭ?

Related posts

ಸಾಲ ತಂದು ಆಡಳಿತ ನಡೆಸುವ ಸ್ಥಿತಿ ಇದೆ: ಸಚಿವ ಮಾಧುಸ್ವಾಮಿ

Times fo Deenabandhu

ಟೈರ್‌ನೊಳಗೆ ಸಿಕ್ಕಿಕೊಂಡ ಶ್ವಾನದ ತಲೆ

Times fo Deenabandhu

 ರಾಜ್ಯದಲ್ಲಿ ಕ್ವಾರಂಟೈನ್‌ ಮುಗಿಸಿದವರಿಗೆ ಕೊರೊನಾ ಪರೀಕ್ಷೆ ಇಲ್ಲ, ನೇರ ಮನೆಗೆ!