Times of Deenabandhu
  • Home
  • ಪ್ರಧಾನ ಸುದ್ದಿ
  • ಕಾಡಿನ ನಡುವೆ ಇರುವ ಪಾಳು ಕೋಟೆಯಲ್ಲಿದೆಯಂತೆ ಕೋಟಿ ಕೋಟಿ ಮೌಲ್ಯದ ಖಜಾನೆ…!
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕಾಡಿನ ನಡುವೆ ಇರುವ ಪಾಳು ಕೋಟೆಯಲ್ಲಿದೆಯಂತೆ ಕೋಟಿ ಕೋಟಿ ಮೌಲ್ಯದ ಖಜಾನೆ…!

ರಾಜರ ಆಳ್ವಿಕೆ ಮುಗಿದು ಅದೆಷ್ಟೋ ವರ್ಷಗಳು ಕಳೆದಿವೆ. ಆದರೆ, ಅಂದಿನ ಆಳ್ವಿಕೆಯ ಬಗೆಗಿನ ಕುತೂಹಲವಂತೂ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಇಂದಿಗೂ ರಹಸ್ಯವಾಗಿ ಉಳಿದಿರುವ ಖಜಾನೆ ಕತೆಗಳು…!
ಬೆಟ್ಟದ ಮೇಲಿರುವ ಅದೊಂದು ಪಾಳು ಕೋಟೆಯಲ್ಲಿ ಇದೆಯಾ ಕೋಟಿ ಕೋಟಿ ಮೌಲ್ಯದ ಖಜಾನೆ…? ಈ ಸಂಪತ್ತು ಸಿಕ್ಕರೆ ನಮ್ಮ ದೇಶ ಮತ್ತೊಂದು ಬಾರಿ ಚಿನ್ನದ ಖಜಾನೆಯಾಗಲು ಸಾಧ್ಯವಿದೆಯೇ…? ಸ್ವತಃ ರಾಜನೇ ತನ್ನ ಖಜಾನೆಗೆ ಶಾಪ ಕೊಟ್ಟು ಯಾರಿಗೂ ಸಿಗದಂತೆ ಮಾಡಿದ್ದನೇ…? ಅಂದು ರಾಜ ಬಿಟ್ಟು ಹೋಗಿದ್ದ ಈ ಸಂಪತ್ತನ್ನು ಇಂದಿಗೂ ವಿಷಕಾರಿ ಹಾವುಗಳು ಕಾವಲು ಕಾಯುತ್ತಿದ್ದವಾ…? ಸಂಪತ್ತಿನ ಶೋಧಕ್ಕೆ ಹೊರಟರೆ ಹಾವುಗಳು ಬಂದು ಅಡ್ಡಿಪಡಿಸುತ್ತವಾ…? ಹೀಗೆ ಸುರುಳಿ ಸುತ್ತುತ್ತವೆ ಪ್ರಶ್ನೆಗಳು… ಆದರೆ, ಈ ಯಾವ ಪ್ರಶ್ನೆಗೂ ಉತ್ತರ ಇಲ್ಲ. ಶತಶತಮಾನಗಳು ಕಳೆದರೂ ಈ ರಹಸ್ಯದ ಪೊರೆಯೂ ಕಳಚಿಲ್ಲ… ಇಷ್ಟಕ್ಕೂ ಇಂತಹ ಪ್ರಶ್ನೆಗಳಿಗೆ ಕಾರಣವಾಗಿದ್ದು ಅದೊಂದು ಪಾಳು ಕೋಟೆ…!
ಸದ್ಯ ಇದೊಂದು ಪಾಳುಕೋಟೆ. ಆದರೆ, ಒಂದು ಕಾಲದಲ್ಲಿ ಸಿರಿವಂತಿಕೆ, ವೈಭವವನ್ನು ಕಂಡಿದ್ದ ಮಹಲ್ ಇದು. ಈ ಪಾಳುಕೋಟೆ ತನ್ನೊಡಲಿನಲ್ಲಿ ಬಚ್ಚಿಟ್ಟುಕೊಂಡಿದೆ ಅದೆಷ್ಟೋ ರಹಸ್ಯ. ಇಂತಹ ಕೋಟೆ ಇರುವುದು ಹಿಮಾಚಲ ಪ್ರದೇಶದ ಹಮೀರ್‌ ಜಿಲ್ಲೆಯಲ್ಲಿ. ಬೆಟ್ಟ ಮೇಲಿರುವ ಈ ಕೋಟೆ ಈಗ ಅಕ್ಷರಶಃ ಪಾಳು ಬಿದ್ದು ತನ್ನ ದುಸ್ಥಿತಿಯನ್ನು ಸಾರುತ್ತಿದೆ. ಸುತ್ತಲೂ ಗಿಟಗಂಟಿಗಳು ಬೆಳೆದು ಹಗಲಿನಲ್ಲೂ ಇಲ್ಲಿಗೆ ಹೋಗಲು ಜನ ಹೆದರುತ್ತಾರೆ. ವಿಷಕಾರಿ ಹಾವುಗಳ ಭೀತಿ ಇರುವುದರಿಂದ ಇತ್ತ ಜನ ಹೋಗುವುದೇ ಇಲ್ಲ. ಹೀಗೆ ಜನರಲ್ಲೊಂದು ಅವ್ಯಕ್ತ ಭಯ ಸೃಷ್ಟಿಸಿರುವ ಈ ಕೋಟೆಯಲ್ಲಿ ಇದೆಯಂತೆ ಕೋಟಿ ಕೋಟಿ ರೂಪಾಯಿ ಮೌಲ್ಯದ ಸಂಪತ್ತು…
ಲಭ್ಯ ಕತೆ ಮತ್ತು ಜನರ ನಂಬಿಕೆ ಪ್ರಕಾರ ಪಾಳು ಬಿದ್ದ ಈ ಕೋಟೆಯಲ್ಲಿ ಇರುವುದು ರಾಜಾ ಸಂಸಾರ್ ಚಂದ್ರನ ಸಂಪತ್ತಂತೆ. ಸಂಸಾರ್‌ ಚಂದ್ರ 1765 ರಿಂದ 1823ರತನಕ ಹಿಮಾಚಲ ಪ್ರದೇಶದ ಕಾಂಗ್ರಾವನ್ನು ಆಳಿದ್ದಾಗಿ ಇತಿಹಾಸದಲ್ಲಿ ಉಲ್ಲೇಖವಿದೆ. ಅದೂ ಅಲ್ಲದೆ, ಕಲೆ ಸಾಹಿತ್ಯಕ್ಕೆ ಅಪಾರ ಪ್ರೋತ್ಸಾಹ ನೀಡುತ್ತಿದ್ದ ರಾಜಾ ಸಂಸಾರ್ ಚಂದ್ರ ಕಾಲದಲ್ಲಿ ಕಾಂಗ್ರಾ ವರ್ಣಚಿತ್ರಗಳ ಖ್ಯಾತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು.
1758ರಲ್ಲಿ ಕಟೋಚ್ ರಾಜವಂಶದ ರಾಜ ಅಭಯ್ ಚಂದ್ ಕಾಲದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿತ್ತಂತೆ. ರಾಜ ಅಭಯ್ ಚಂದ್ ಬಳಿಕ ಇಲ್ಲಿ ಸಂಸಾರ್ ಚಂದ್ ಆಳ್ವಿಕೆ ನಡೆದಿತ್ತು. ರಾಜಾ ಸಂಸಾರ್ ಚಂದ್ರ ಅತ್ಯಂತ ಸಿರಿವಂತ ರಾಜರುಗಳಲ್ಲಿ ಒಬ್ಬ. ರಾಜಾ ಸಂಸಾರ್ ಚಂದ್ರ ಬಳಿ ಅಪರಿಮಿತ ಸಂಪತ್ತು ಇತ್ತಂತೆ. ಈ ಸಂಪತ್ತನ್ನೆಲ್ಲಾ ಬಚ್ಚಿಡಲು ರಾಜ ಈ ಕೋಟೆಯಲ್ಲಿ ರಹಸ್ಯ ಕೋಣೆಗಳನ್ನು ನಿರ್ಮಿಸಿದ್ದಾಗಿ ಹೇಳಲಾಗುತ್ತಿದೆ. ತನ್ನ ಸಾಮ್ರಾಜ್ಯ ವಿಸ್ತರಣೆಗೆ ನಡೆದಿದ್ದ ಯುದ್ಧದಲ್ಲಿ ಗಳಿಸಿದ್ದ ಸಂಪತ್ತನ್ನೂ ರಾಜ ಇದೇ ಕೋಟೆಯ ರಹಸ್ಯ ಕೋಣೆಯಲ್ಲಿ ಸಂಗ್ರಹಿಸಿಟ್ಟಿದ್ದಾಗಿ ನಂಬಿಕೆ ಇದೆ. ಆಕ್ರಮಣಕಾರರಿಂದ ತನ್ನ ಖಜಾನೆಯನ್ನು ರಕ್ಷಿಸುವ ಉದ್ದೇಶವೂ ಈ ಕೋಟೆಯ ಹಿಂದಿತ್ತು. ಇದೇ ಕಾರಣಕ್ಕೆ ನಗರದಿಂದ ಬಲು ದೂರದ ಮತ್ತು ಎತ್ತರ ಪ್ರದೇಶದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಈ ಕೋಟೆಯಲ್ಲಿ ಖಜನೆ ಇದೆ ಎಂಬ ಕಾರಣಕ್ಕೆ ಈಗ ಈ ಕೋಟೆಯನ್ನು `ಖಜಾಂಚಿ ಪೋರ್ಟ್’ ಎಂದೂ ಕರೆಯಲಾಗುತ್ತದೆ.
ಸುಮಾರು 260 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಕೋಟೆಯೊಳಗೆ ಸುಮಾರು 5 ಕಿಲೋ ಮೀಟರ್ ದೂರದ ಸುರಂಗ ಮಾರ್ಗ ಇದೆಯಂತೆ. ಈ ಸುರಂಗ ನೇರವಾಗಿ ಸೇರುತ್ತಿದ್ದದ್ದು, ಖಜಾನೆಯಿದ್ದ ರಹಸ್ಯ ಕೋಣೆಗಳಿಗೆ. ಆದರೆ, ಇಲ್ಲಿರುವ ಖಜಾನೆಗಳ ರಹಸ್ಯ ಗೊತ್ತಿದ್ದದ್ದು ರಾಜ ಸಂಸಾರ್ ಚಂದ್ರಗೆ ಮಾತ್ರ. ಅದೂ ಅಲ್ಲದೆ, ತನ್ನನ್ನು ಹೊರತಾಗಿ ಈ ಖಜಾನೆ ಯಾರಿಗೂ ಸಿಗಬಾರದು ಎಂದು ರಾಜ ಶಪಿಸಿದ್ದನಂತೆ. ಈ ಕಾರಣದಿಂದ ಇಂದಿಗೂ ಈ ಖಜಾನೆಗೆ ಕೈ ಹಾಕಲು ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದು ಜನರ ನಂಬಿಕೆ. ಈಗಲೂ ಈ ಕೋಟೆಯಲ್ಲಿ ಆ ಸುರಂಗ ಮಾರ್ಗದ್ದು ಎನ್ನಲಾದ ದಾರಿ ಇದೆ. ಆದರೆ, ಈ ಸುರಂಗದ ಇನ್ನೊಂದು ತುದಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.
ರಾಜಾ ಸಂಸಾರ್ ಚಂದ್ ಮರಣಾನಂತರ ಕುಟುಂಬಸ್ಥರಿಗೂ ಈ ಖಜಾನೆ ಸಿಗಲಿಲ್ಲ. ಹೀಗಾಗಿ, ಅನೇಕ ಸಲ ಈ ಖಜಾನೆಯ ಶೋಧದ ಯತ್ನವೂ ನಡೆದಿತ್ತು. ಆದರೆ, ಯಾವಾಗ ಖಜಾನೆಯ ಶೋಧಕ್ಕಿಳಿದರೂ ಇಲ್ಲಿ ಹಾವು ಕಾಣಿಸಿಕೊಳ್ಳುತ್ತಿತ್ತಂತೆ. ಪರಿಣಾಮ, ಖಜಾನೆ ಶೋಧದಲ್ಲಿ ಯಾರೂ ಯಶಸ್ಸು ಗಳಿಸಿರಲಿಲ್ಲ. ಹೀಗಾಗಿ, ರಾಜನ ಖಜಾನೆಯನ್ನು ಈಗಲೂ ಹಾವುಗಳು ಕಾವಲು ಕಾಯುತ್ತಿವೆ ಎಂಬ ನಂಬಿಕೆ ಈ ಭಾಗದಲ್ಲಿದೆ… ಕೆಲವರು ಇಲ್ಲಿ ಆತ್ಮಗಳ ಸಂಚಾರ ಇದೆ ಎಂದೂ ಹೇಳುತ್ತಾರೆ. ಈ ದೆವ್ವ ಭೂತದ ಕತೆಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಲಾಗದು. ಆದರೆ, ಇಂತಹದ್ದೊಂದು ನಂಬಿಕೆ ಈ ಭಾಗದಲ್ಲಿ ಇರುವುದುದಂತೂ ಸತ್ಯ. ಈ ನಂಬಿಕೆಯ ನಡುವೆ ಒಂದು ಕಾಲದಲ್ಲಿ ಸಿರಿವಂತಿಕೆ ಕಂಡಿದ್ದ ಕೋಟೆ ಮಾತ್ರ ಅಕ್ಷರಶಃ ಪಾಳು ಬಿದ್ದಂತಾಗಿದೆ. ಜೊತೆಗೆ, ಖಜಾನೆ ನಿಜವಾಗಿಯೂ ಇದೆಯಾ…? ಅಥವಾ ಬರೀ ನಂಬಿಕೆನಾ ಎಂಬುದು ಕೂಡಾ ಉತ್ತರವಿಲ್ಲದ ದೊಡ್ಡ ರಹಸ್ಯದ ಗಂಟಾಗಿದೆ…

Related posts

 ಶಾಸಕ ಜಮೀರ್‌ಗೂ ಸುತ್ತಿಕೊಳ್ಳುತ್ತಾ ಡ್ರಗ್ಸ್‌ ಉರುಳು? ಗುರುವಾರ ಸಿಸಿಬಿಯಿಂದ ನೋಟಿಸ್‌?

Times fo Deenabandhu

 ಜುಲೈ 14ರ ರಾತ್ರಿಯಿಂದ ಒಂದು ವಾರ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಲಾಕ್‌ಡೌನ್‌

ಪದ್ಮ ಪುರಸ್ಕಾರಗಳ ಬಗ್ಗೆ ನಿಮಗೆಷ್ಟು ಗೊತ್ತು?

Times fo Deenabandhu