Times of Deenabandhu
ಮುಖ್ಯಾಂಶಗಳು ಸಾಹಿತ್ಯ/ಸಂಸ್ಕೃತಿ

ಸಾಮೂಹಿಕ ವಿವಾಹಕ್ಕೆ ಸಾವಿರಕ್ಕೂ ಅಧಿಕ ಜೋಡಿ: ಮಾ.27ರವರೆಗೆ ನೋಂದಣಿ

ಬೈಂದೂರು: ರಾಜ್ಯ ಸರಕಾರದ ಬಹುನಿರೀಕ್ಷಿತ ಸಪ್ತಪದಿ ಸಾಮೂಹಿಕ ಸರಳ ವಿವಾಹ ಸಮಾರಂಭ ಏ. 26ರಂದು ನಡೆಯಲಿದ್ದು ಈಗಾಗಲೇ ಸಾವಿರಕ್ಕೂ ಅಧಿಕ ಜೋಡಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಮಾ. 27ರವರೆಗೆ ನೋಂದಣಿ ಮಾಡಿಕೊಳ್ಳಲು ಕಾಲಾವಕಾಶವಿರುವುದರಿಂದ ಗರಿಷ್ಠ ಸಂಖ್ಯೆಯಲ್ಲಿ ಜೋಡಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಗುರುವಾರ ಸಪ್ತಪದಿ ಸಾಮೂಹಿಕ ಸರಳ ವಿವಾಹದ ಪ್ರಚಾರದ ರಥಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಕೊಲ್ಲೂರಲ್ಲಿ 26 ಜೋಡಿ ನೋಂದಣಿ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಈಗಾಗಲೇ 26ಕ್ಕೂ ಅಧಿಕ ಜೋಡಿ ನೋಂದಣಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ100ಕ್ಕೂ ಅಧಿಕ ಜೋಡಿ ನೊಂದಾಯಿಸಿಕೊಳ್ಳುವ ಸಾಧ್ಯತೆಯಿದೆ. ರಾಜ್ಯದ ಸ್ವಾಮೀಜಿಗಳು, ಸಾಧು ಸಂತರು, ಗಣ್ಯರು, ಶಾಸಕರು, ಸಂಸದರು ಸೇರಿದಂತೆ ಪಕ್ಷಬೇಧ ಮರೆತು ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ಈ ಯೋಜನೆಯ ಬಗ್ಗೆ ಜನಾಂದೋಲನ ರೂಪಿಸಿ ಯುವಜನತೆ ಹೆಚ್ಚಾಗಿ ಸರಳವಿವಾಹದ ಕಡೆ ಮುಖಮಾಡುವಂತೆ ಅರಿವು ಮೂಡಿಸುವ ಕೆಲಸಮಾಡಲಾಗುವುದು ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದಾರೆ. ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಹಾಗೂ ಚಿತ್ರನಟ ಯಶ್‌ ಈ ಯೋಜನೆ ರಾಯಭಾರಿಗಳಾಗಿದ್ದು ಮುಂದಿನ ದಿನಗಳಲ್ಲಿಅವರು ರಾಜ್ಯದ ಎಲ್ಲಾಜಿಲ್ಲೆಗಳಲ್ಲಿಯೂ ಸಾಮೂಹಿಕ ಸರಳ ವಿವಾಹದ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗುತ್ತದೆ. ಈ ವಿವಾಹದಲ್ಲಿವರನಿಗೆ 5 ಸಾವಿರ ರೂ., ವಧುವಿಗೆ 10 ಸಾವಿರ ರೂ. ಹಾಗೂ 8 ಗ್ರಾಂ ಚಿನ್ನದ ಮಾಂಗಲ್ಯ ಸರ ನೀಡಲಾಗುತ್ತದೆ. ಅಲ್ಲದೆ ವಧುವಿಗೆ ಕಂದಾಯ ಇಲಾಖೆ ವತಿಯಿಂದ ಆದರ್ಶ ವಿವಾಹ ಯೋಜನೆಯ 10 ಸಾವಿರ ರೂ. ನಿಶ್ಚಿತ ಠೇವಣಿ ಸೌಲಭ್ಯ ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜಕಲ್ಯಾಣ ಇಲಾಖೆಯಿಂದ 50 ಸಾವಿರ ರೂ. ನೀಡಲಾಗುತ್ತದೆ. ಈ ವಿವಾಹದಲ್ಲಿವಧು ವರರ ಬಂಧುಗಳ ಕಡೆಯಿಂದ ಎಷ್ಟೇ ಜನರು ಪಾಲ್ಗೊಂಡರೂ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಸುರೇಶ ಬಟವಾಡಿ, ತಾ.ಪಂ. ಸದಸ್ಯೆ ಗ್ರೀಷ್ಮಾ ಬಿಢೆ, ಮಹೇಂದ್ರ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನರಸಿಂಹ ಹಳಗೇರಿ, ರಮೇಶ ಗಾಣಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ಜಯಂತಿ ವಿಜಯಕೃಷ್ಣ, ಅಂಬಿಕಾ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಪ್ರಕಾಶ ಪೂಜಾರಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ ಮತ್ತಿತರರು ಉಪಸ್ಥಿತರಿದ್ದರು.

ಕೊಲ್ಲೂರು ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಹರೀಶ್‌ಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಸಚಿನ್‌ ಕುಮಾರ್‌ ಶೆಟ್ಟಿ ನಿರೂಪಿಸಿದರು.

Related posts

ಹ್ಯಾಂಡ್ ಸ್ಯಾನಿಟೈಸರ್ ಕಂಡು ಹಿಡಿದವರು ಯಾರು ಗೊತ್ತಾ? ಹೆಚ್ಚಾಗಿದೆ ಕುತೂಹಲ

Times fo Deenabandhu

ಪಕ್ಷದ ನಾಯಕತ್ವ ಗಾದಿಗೆ ರಾಹುಲ್ ಮರಳದಿದ್ದರೆ, ಪ್ರಿಯಾಂಕಾ ಸೂಕ್ತ, ಆದರೆ…?

Times fo Deenabandhu

ಇದೆಲ್ಲಾ ಕೊರೊನಾ ಬಗ್ಗೆ ಇರುವ ಸುಳ್ಳು ಸುದ್ದಿಗಳು, ನಂಬಲೇಬೇಡಿ!

Times fo Deenabandhu