Times of Deenabandhu
ಮುಖ್ಯಾಂಶಗಳು ಸಾಹಿತ್ಯ/ಸಂಸ್ಕೃತಿ

ಪಾಂಡವರು ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಿದ್ದು ಇದೇ ದೇಗುಲದಲ್ಲಂತೆ…!

ಇದೊಂದು ಪುರಾತನ ದೇಗುಲ. ಈ ದೇಗುಲದ ಹಿಂದಿದೆ ಪಾಂಡವರ ಕತೆ. ವರ್ಷದ 8 ತಿಂಗಳು ನೀರಿನಲ್ಲೇ ಮುಳುಗಿರುವ ಈ ದೇಗುಲಕ್ಕೆ ಸಂಬಂಧಿಸಿದಂತೆ ಕೇಳಿ ಬರುತ್ತವೆ ಬಗೆಬಗೆ ರಹಸ್ಯಮಯ ಕತೆಗಳು…!
ನಮ್ಮ ದೇಶದಲ್ಲಿ ಹಲವಾರು ವಿಶಿಷ್ಟ ಮತ್ತು ರಹಸ್ಯಮಯ ಜಾಗಗಳಿವೆ. ಇಂತಹ ಒಂದೊಂದು ಜಾಗದ ಹಿಂದೆಯೂ ನೂರಾರು ದಂತಕತೆ, ನೂರಾರು ನಂಬಿಕೆಗಳಿವೆ. ಕೆಲವೊಂದು ಜಾಗಗಳನ್ನು ನೋಡುವಾಗಂತೂ ನಿಜಕ್ಕೂ ಅಚ್ಚರಿಯಾಗುತ್ತದೆ. ಅದರಲ್ಲೂ ಪುರಾತನ ಕಾಲದಲ್ಲಿ ನಿರ್ಮಾಣವಾಗಿರುವ ಕೆಲವೊಂದು ದೇಗುಲಗಳು ಇಂದಿಗೂ ಅಚ್ಚರಿಯ ಮೂಟೆ. ಕಟ್ಟಡ ನಿರ್ಮಾಣದ ವಿಚಾರದಲ್ಲಿ ಭಾರತ ಅದೆಷ್ಟು ಮುಂದಿತ್ತು, ಇಲ್ಲಿನ ವಾಸ್ತುಶಿಲ್ಪ, ಎಂಜಿನಿಯರಿಂಗ್ ಕೌಶಲ್ಯದ ಸಿರಿವಂತಿಕೆ ಎಷ್ಟಿತ್ತು ಎಂಬುದನ್ನು ಇಂದಿಗೂ ಸಾಕ್ಷೀಕರಿಸುತ್ತವೆ ನಮ್ಮಲ್ಲಿರುವ ಅದೆಷ್ಟೋ ದೇಗುಲಗಳು. ಇದು ಕೂಡಾ ಅಂತಹದ್ದೇ ಒಂದು ದೇಗುಲ. ಈ ದೇಗುಲಕ್ಕೂ ಪಾಂಡವರಿಗೂ ಇದೆಯಂತೆ ಸಂಬಂಧ.
ಹಿಮಾಚಲ ಪ್ರದೇಶ ದೇವಭೂಮಿ ಎಂದೇ ಪ್ರಸಿದ್ಧ. ಇಂತಹ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲೊಂದು ವಿಶಿಷ್ಟ ದೇಗುಲವಿದೆ. ಇದನ್ನು ಸ್ಥಳೀಯವಾಗಿ ಬಾತು ಕಿ ಲಡಿ ಎಂದು ಕರೆಯಲಾಗುತ್ತದೆ. ಬಾತು ಎಂಬುದು ಸ್ಥಳದ ಹೆಸರು. ಸ್ಥಳೀಯ ಭಾಷೆಯಲ್ಲಿ ಲಡಿ ಎಂದರೆ ಮೆಟ್ಟಿಲು ಎಂದರ್ಥ. ಈ ದೇಗುಲದ ಇನ್ನೊಂದು ವಿಶೇಷತೆ ಎಂದರೆ ಇದರ ದರ್ಶನ ಸಿಗುವುದು ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ…! ಬಹುತೇಕ 8 ತಿಂಗಳ ಕಾಲ ಈ ದೇಗುಲ ಮಹಾರಾಣಾ ಪ್ರತಾಪ್ ಸಾಗರ ಅಣೆಕಟ್ಟಿನಲ್ಲಿ ಮುಳುಗಿರುತ್ತದೆ. ಬೇಸಿಗೆಯಲ್ಲಿ ನೀರಿನ ಮಟ್ಟ ಇಳಿಯುತ್ತಿದ್ದಂತೆಯೇ ಈ ಅಪೂರ್ವ ದೇಗುಲದ ದರ್ಶನ ಸಿಗುತ್ತದೆ.
ಸ್ಥಳೀಯರು ಹೇಳುವಂತೆ ಈ ದೇಗುಲಕ್ಕೂ ಪಾಂಡವರಿಗೂ ಸಂಬಂಧ ಇದೆಯಂತೆ. ಇಲ್ಲಿನವರ ನಂಬಿಕೆ ಪ್ರಕಾರ, ಪಾಂಡವರು ಒಂದೇ ರಾತ್ರಿಯಲ್ಲಿ ಈ ದೇಗುಲವನ್ನು ನಿರ್ಮಿಸಿದ್ದರಂತೆ. ಅಂದರೆ, ಆಗ ಶ್ರೀಕೃಷ್ಣನು ಪಾಂಡವರಿಗೆ ನೆರವಾಗಿದ್ದರಿಂದ ಆ ರಾತ್ರಿ ಆರು ತಿಂಗಳಿಂದ ಕೂಡಿತ್ತಂತೆ…! ಹೀಗಂತ, ಈ ದೇಗುಲದ ಹಿಂದಿರುವ ಐತಿಹ್ಯ, ನಂಬಿಕೆಯನ್ನು ಕೆಲವರು ಬಿಚ್ಚಿಡುತ್ತಾರೆ. ಇನ್ನು, ಕೆಲವರು ಈ ದೇಗುಲವನ್ನು ಪುರಾತನ ಕಾಲದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರಾಜರು ನಿರ್ಮಿಸಿದ್ದಾರೆ ಎಂದು ಹೇಳುತ್ತಾರೆ. ಈ ಬಗ್ಗೆ ಎರಡೂ ವಾದಗಳೂ ಇವೆ. ಆದರೆ, ಈ ದೇಗುಲ ನಿರ್ಮಾಣದ ಹಿನ್ನೆಲೆಯ ನಿಶ್ಚಿತ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ. ಪಾಂಡವರೋ ಅಥವಾ ಸ್ಥಳೀಯ ರಾಜರೋ ಯಾರು ನಿರ್ಮಿಸಿದ್ದರೂ ಈ ದೇಗುಲವನ್ನು ನೋಡಿದಾಗಂತೂ ನಿಜಕ್ಕೂ ಅಚ್ಚರಿಯಾಗುತ್ತದೆ. ಮನಸ್ಸಿಗೂ ಆನಂದವಾಗುತ್ತದೆ.
ಸ್ಥಳೀಯರ ನಂಬಿಕೆ ಪ್ರಕಾರ ಪಾಂಡವರು ಇಲ್ಲಿ ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸುವ ಪ್ರಯತ್ನ ಮಾಡಿದ್ದರಂತೆ. ಹೀಗೆ, ಪಾಂಡವರು ಸ್ವರ್ಗಕ್ಕೆ ಸಾಗಲು ನಿರ್ಮಿಸಿದ ಮೆಟ್ಟಿಲು ಎಂದು ನಂಬಿಕೆ ಇರುವ ದೊಡ್ಡ ಸ್ತಂಬದ ರೀತಿಯ ನಿರ್ಮಾಣ ಈಗಲೂ ಇಲ್ಲಿದೆ. ಇದರೊಳಗೆ ಮೆಟ್ಟಿಲುಗಳಿವೆ. ಅದೇ ಕಾರಣಕ್ಕೆ ಈ ದೇಗುಲಕ್ಕೆ ಬಾತು ಕಿ ಲಡಿ ಎಂಬ ಹೆಸರು ಬಂದಿರುವುದು. ಇದೊಂದು ಅಪೂರ್ವ ದೇಗುಲ. ಇಲ್ಲಿ ಎಂಟು ದೇಗುಲಗಳಿವೆ. ದೇವಾಲಯದ ಕಲ್ಲಿನಲ್ಲಿ ಕಾಳಿ ಮತ್ತು ಗಣೇಶನ ಮೂರ್ತಿಗಳ ಕೆತ್ತನೆಗಳಿವೆ. ದೇಗುಲದ ಒಳಗೆ ವಿಷ್ಣುವಿನ ರೂಪ ಮತ್ತು ಪ್ರಧಾನ ದೇಗುಲದಲ್ಲಿ ಶಿವಲಿಂಗವನ್ನೂ ಕಾಣಬಹುದಾಗಿದೆ. ಶಿವನ ಪೂಜೆಗೆಂದು ಪಾಂಡವರು ಇಲ್ಲಿ ಈ ದೇಗುಲಗಳನ್ನು ನಿರ್ಮಿಸಿದ್ದರಂತೆ. ಆದರೆ, ಸ್ವರ್ಗಕ್ಕೆ ನಿರ್ಮಿಸಿದ ಮೆಟ್ಟಿಲು ಬರೀ ಸಾವಿರದ ಆಸುಪಾಸಲ್ಲೇ ಯಾಕಿದೆ ಎಂಬ ಪ್ರಶ್ನೆ ಕೂಡಾ ಮೂಡುವುದು ಸಹಜ. ಇದಕ್ಕೆ ಇಲ್ಲಿನವರು ನೀಡುವ ಉತ್ತರವೇನೆಂದರೆ, ಇಲ್ಲಿಂದ ಮೇಲಿರುವ ಮೆಟ್ಟಿಲುಗಳು ಅದೃಶ್ಯ ರೂಪದಲ್ಲಿದೆ ಎನ್ನುವುದು.
ನಿಜಕ್ಕೂ ಈ ದೇಗುಲದ ನಿರ್ಮಾಣವೇ ಇಂದಿಗೂ ಅಚ್ಚರಿ. ಇದು ಸುಮಾರು ಐದು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇಗುಲ. ಕಳೆದ ಐದು ದಶಕದಿಂದ ಈ ದೇಗುಲ ಬಹುತೇಕ ನೀರಿನಲ್ಲಿ ಮುಳುಗಿದೆ. ಜುಲೈನಿಂದ ಫೆಬ್ರವರಿ ತನಕ ಈ ದೇಗುಲ ನೀರಿನೊಳಗೆ ಸಂಪೂರ್ಣ ಮುಳುಗಿರುತ್ತದೆ. ಮಾರ್ಚಿನಿಂದ ಜೂನ್ ತನಕ ಮಾತ್ರ ಈ ದೇಗುಲದ ದರ್ಶನ ಭಾಗ್ಯ ಸಿಗುವುದು. ಒಮ್ಮೆ ಅಣೆಕಟ್ಟಿನ ನೀರಿನ ಮಟ್ಟ ಏರಿಕೆಯಾದರೆ ದೇಗುಲ ಮತ್ತೆ ನೀರಿನಲ್ಲಿ ಮುಳುಗಿ ಹೋಗುತ್ತದೆ. ಹೀಗೆ, ವರ್ಷದ ಎಂಟು ತಿಂಗಳ ಕಾಲ ಈ ದೇಗುಲ ಸಂಪೂರ್ಣ ನೀರಿನಿಂದ ಆವೃತ್ತವಾಗಿರುತ್ತದೆ. ಆದರೆ, ಬಹುಕಾಲ ನೀರಿನಲ್ಲಿ ಮುಳುಗಿದ್ದರೂ ಈ ದೇಗುಲದ ಅಡಿಪಾಯ ಶಿಥಿಲವಾಗಿಲ್ಲ. ಗೋಡೆಗಳು ಪಾಚಿಗಟ್ಟಿರುವುದಿಲ್ಲ. ಇದೇ ಕಾರಣಕ್ಕೆ ಈ ದೇಗುಲವನ್ನು ಜನ ಅಚ್ಚರಿಯಿಂದ ನೋಡುತ್ತಾರೆ. ನೀರೆಲ್ಲಾ ಇಳಿದ ಮೇಲೆ ಇಲ್ಲಿ ಪೂಜೆ ಪುನಸ್ಕಾರಗಳೂ ನಡೆಯುತ್ತವೆ. ಯಾವುದೋ ಅನೂಹ್ಯ ಶಕ್ತಿ ಇರುವುದರಿಂದಲೇ ದೇಗುಲ ಈ ರೀತಿ ಸುಭದ್ರವಾಗಿದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಜನರ ನಂಬಿಕೆಯನ್ನು ಪ್ರಶ್ನೆ ಮಾಡುವಂತಿಲ್ಲ. ನಂಬಿಕೆಯೇ ಜೀವನ. ಹೀಗಾಗಿ, ಇದೊಂದು ಶೃದ್ಧಾಕೇಂದ್ರವೂ ಆಗಿದೆ. ಆದರೆ, ಈ ದೇಗುಲದ ನಿರ್ಮಾಣ ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಅದೆಂಥಾ ತಂತ್ರ ಬಳಸಿ ಈ ದೇಗುಲ ನಿರ್ಮಿಸಲಾಗಿದೆ. ನೀರಲ್ಲಿದ್ದರೂ ಈ ದೇಗುಲ ಶಿಥಿಲಗೊಳ್ಳದೆ ತನ್ನ ಅದೇ ಅಪೂರ್ವ ಸೌಂದರ್ಯವನ್ನು ಉಳಿಸಿಕೊಂಡಿದ್ದು ಹೇಗೆ…? ಯಾವ ಕಾಲದಲ್ಲಿ ನಿರ್ಮಾಣವಾದ ದೇಗುಲವಿದು…? ಇಂತಹ ಸಾಲು ಸಾಲು ಕೌತುಕದ ಪ್ರಶ್ನೆಗಳು ಮೂಡುತ್ತವೆ. ಹೀಗಾಗಿ, ಈ ದೇಗುಲ ಬಗೆಹರಿಯದ ರಹಸ್ಯವಾಗಿಯೇ ಉಳಿದಿದೆ…

Related posts

ಶೇ. 80ರಷ್ಟು ಕೊರೊನಾ ರೋಗಿಗಳಿಗೆ ಅತ್ಯಂತ ಕ್ಷೀಣ ಅಥವಾ ರೋಗ ಲಕ್ಷಣವೇ ಇಲ್ಲ!

Times fo Deenabandhu

ಟೈರ್‌ನೊಳಗೆ ಸಿಕ್ಕಿಕೊಂಡ ಶ್ವಾನದ ತಲೆ

Times fo Deenabandhu

ಲಾಠಿಚಾರ್ಜ್​, ಬಂಧನದ ಮೂಲಕ ಹಕ್ಕು ಕಿತ್ತುಕೊಳ್ಳಬಾರದು: ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್​

Times fo Deenabandhu