Times of Deenabandhu
  • Home
  • ನ್ಯೂಸ್
  • ರಾಜ್ಯ
  • ಸಾಮೂಹಿಕ ನಕಲು: ಕುವೆಂಪು ವಿವಿಗೆ ಶಾಪವಾಗಿರುವ ದೂರಶಿಕ್ಷಣ ಅಧ್ಯಯನ ಕೇಂದ್ರಗಳು
ಅಂಕಣ ಮುಖ್ಯಾಂಶಗಳು ರಾಜ್ಯ ಶಿಕ್ಷಣ

ಸಾಮೂಹಿಕ ನಕಲು: ಕುವೆಂಪು ವಿವಿಗೆ ಶಾಪವಾಗಿರುವ ದೂರಶಿಕ್ಷಣ ಅಧ್ಯಯನ ಕೇಂದ್ರಗಳು

Spread the love

ಶಂಕರಘಟ್ಟ ಫೆ.10: ಕುವೆಂಪು ವಿಶ್ವವಿದ್ಯಾನಿಲಯ ನ್ಯಾಕ್ ‘ಎ’ ಗ್ರೇಡ್, ಎನ್‍ಐಆರ್‍ಏಫ್ ನಲ್ಲಿ 73ನೇ ಸ್ಥಾನ, ಕೆಎಸ್‍ಯುಆರ್‍ಎಫ್‍ನಲ್ಲಿ ನಾಲ್ಕು ಸ್ಟಾರ್ ಇವುಗಳು ರಾಷ್ಟ್ರಕವಿ ಕುವೆಂಪು ಅವರ ಹೆಸರನೊತ್ತಿರುವ ಕುವೆಂಪು ವಿಶ್ವವಿದ್ಯಾನಿಲಯದ ಹಿರಿಮೆ-ಗರಿಮೆ. ಆದರೆ ಈ ಎಲ್ಲ ಹಿರಿಮೆ-ಗರಿಮೆಗಳು ತಾನು ರಾಜ್ಯದೆಲ್ಲೆಡೆ ನಡೆಸುತ್ತಿರುವ ದೂರಶಿಕ್ಷಣ ಅಧ್ಯಯನ ಕೇಂದ್ರಗಳಿಂದ ಮಣ್ಣುಪಾಲಾಗುವ ಸ್ಥಿತಿ ತಲುಪಿದೆ.

ಪ್ರತಿಬಾರಿಯು ವಿಶ್ವವಿದ್ಯಾನಿಲಯ ದೂರಶಿಕ್ಷಣ ಪರೀಕ್ಷೆಗಳು ಪ್ರಾರಂಭವಾದ ಕೂಡಲೇ ಮಾಧ್ಯಮಗಳು ಕುವೆಂಪು ವಿವಿ ದೂರಶಿಕ್ಷಣ ಅಧ್ಯಯನ ಕೇಂದ್ರಗಳಲ್ಲಿ ಸಾಮೂಹಿಕ ಕಾಪಿ ನಡೆಯುತ್ತಿದೆ ಎಂದು ತೋರಿಸಿದ್ದೇ ತೋರಿಸಿದ್ದು. ಈ ವರದಿಗಳ ಬಗ್ಗೆ ಅಧ್ಯಯನ ಕೇಂದ್ರಗಳನ್ನು ನಡೆಸುವವರು ತೋರಿಸಿದರೆ, ತೋರಿಸಲಿ ಬಿಡಿ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ತಮ್ಮ ಛಾಳಿಯನ್ನು ಮಾತ್ರ ಬಿಡುವುದಿಲ್ಲ. ಈ ರೀತಿಯ ವರದಿ ಬಂದ ತಕ್ಷಣ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಸಹ ಸಂಬಂಧಪಟ್ಟ ಅಧ್ಯಯನ ಕೇಂದ್ರಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಹಳಸಲು ಪ್ರತಿಕ್ರಿಯೆಯನ್ನು ಪತ್ರಿಕೆಗಳಿಗೆ ನೀಡಿ ಕೈತೊಳೆದುಕೊಳ್ಳುತ್ತಾರೆ.  ಮಾಧ್ಯಮದಲ್ಲಿ ಪ್ರಸಾರವಾಗುವವರೆಗೆ ವಿವಿಯಿಂದ ತೆರಳಿರುವ ಸಿಬ್ಬಂದಿ ಅಲ್ಲಿ ಏನು ಮಾಡುತ್ತಿರುತ್ತಾರೆ? ಮಾಧ್ಯಮದವರಿಗೆ ಕಂಡಿದ್ದು ಪಾಪ ಈ ಸಿಬ್ಬಂದಿಗೆ ಕಾಣಿಸುವುದಿಲ್ಲವೇ? ಕಂಡರೂ ಕಾಣಿಸಿದಂತೆ ಕುಳಿತುಕೊಂಡು ಬಿಡುತ್ತಾರೋ? ಅದನ್ನು ವಿವಿ ಅಧಿಕಾರಿಗಳೇ ಪ್ರಶ್ನಿಸಬೇಕು. ಒಂದಿಬ್ಬರು ವಿವಿ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿದ್ದರೆ ಇಂತಹ ಪ್ರಕರಣಗಳು ಮರುಕಳುಹಿಸುತ್ತಿರಲಿಲ್ಲ.

ಸರ್ಕಾರ ಮದ್ಯಪಾನ ಮಾಡಬೇಡಿ, ಮಾಡಿದರೆ ಜೀವಕ್ಕೆ ಅಪಾಯವೆಂದು ಜಾಹೀರಾತಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಮತ್ತೊಂದೆಡೆ ಮದ್ಯ ಮಾರಾಟಗಾರರಿಗೆ ತಿಂಗಳಿಗೆ ಇಂತಿಷ್ಟು ಮಾರಾಟ ಮಾಡಲೇ ಬೇಕೆಂಬ ಟಾರ್ಗೆಟ್ ಫಿಕ್ಸ್ ಮಾಡುತ್ತೆ. ಯಾಕೆ ಇಷ್ಟೆಲ್ಲ ಗೊಂದಲ ಮಧ್ಯ ಮಾರಾಟವನ್ನೇ ನಿಲ್ಲಿಸಿಬಿಡಬಹುದಲ್ಲಾ, ಆದರೆ ಸರ್ಕಾರ ನಡೆಯಬೇಕಲ್ಲ? ಮದ್ಯದ ತೆರಿಗೆ ಹಣವಿಲ್ಲದಿದ್ದರೆ ಸರ್ಕಾರವೇ ನಡೆಸೋದಕ್ಕಾಗುವುದಿಲ್ಲ ಎನ್ನುವ ಮನಸ್ಥಿತಿಗೆ ಸರ್ಕಾರ ನಡೆಸುವವರು ಬಂದಂತಿದೆ.

ಅದೇ ರೀತಿ ಕುವೆಂಪು ವಿವಿ ಪರಿಸ್ಥಿತಿಯು ಅದೇ ಅಗಿದೆ. ವಿಶ್ವವಿದ್ಯಾನಿಲಯದ ಘನತೆಗೆ ಕಪ್ಪುಚುಕ್ಕೆಯಾಗಿರುವ ದೂರಶಿಕ್ಷಣ ಕೇಂದ್ರಗಳನ್ನು ಮುಚ್ಚಿದರೆ ಅದರಿಂದ ಬರುವ ಕೋಟಿಗಟ್ಟಲೇ ಆದಾಯ ನಿಂತು ಹೋಗಿ ಬಿಡುತ್ತದೆ. ಅತಿಥಿ ಉಪನ್ಯಾಸಕರುಗಳಿಗೆ, ಹೊರಗುತ್ತಿಗೆ ಸಿಬ್ಬಂಧಿಗಳಿಗೆ, ಅಷ್ಟೇ ಏಕೆ ಆನೇಕ ಖಾಯಂ ಶಿಕ್ಷಕ ಮತ್ತು ಶಿಕ್ಷಕೇತರರುಗಳಿಗೆ ಆಂತರಿಕ ಸಂಪನ್ಮೂಲದಿಂದ ಸಂಭಳ ನೀಡುಲಾಗುತ್ತದೆ. ದೂರ ಶಿಕ್ಷಣ ಅಧ್ಯಯನ ಕೇಂದ್ರಗಳು ಮುಚ್ಚಿದರೆ ಇವರನ್ನೆಲ್ಲ ಸಂಬಳ ಕೊಡಲಾಗದೇ ಮನೆಗೆ ಕಳುಹಿಸಬೇಕಾಗುತ್ತದೆ.

ನಿನ್ನೆಯು ಕೂಡ ಹಲವಾರು ಕೇಂದ್ರಗಳಲ್ಲಿ ಸಾಮೂಹಿಕ ನಕಲು ನಡೆದಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗಿವೆ. ಇವು ಉದಾಹರಣೆ ಮಾತ್ರ. ನೂರಕ್ಕೆ ತೊಂಭತ್ತು ಭಾಗ ಅಧ್ಯಯನ ಕೇಂದ್ರಗಳಲ್ಲಿ ನಡೆಯುತ್ತಿರುವುದೇ ಇದು. ಕೆಲವರು ಸಾಮೂಹಿಕ ಕಾಪಿಯನ್ನು ಬಹಳ ಜಾಗರೂಕತೆಯಿಂದ ನಡೆಸುತ್ತಾರೆ. ಮಾಧ್ಯಮದವರ ಕಣ್ಣಿಗೆ ಬೀಳದಂತೆ ನಡೆಸುವ ಎಲ್ಲ ಚಾಕ್ಯಚಾಕ್ಯತೆಗಳನ್ನು ಈ ಅಧ್ಯಯನ ಕೇಂದ್ರ ನಡೆಸುವವರು ಹೊಂದಿದ್ದಾರೆ.

ಈಗ ಹೆಸರಿಗೆ ಮಾತ್ರ ಹುಬ್ಬಳ್ಳಿಯ ಕೆಸಿಈ ಮತ್ತು ಬೆಂಗಳೂರಿನ ಸ್ಫೂರ್ತಿ ಎಜುಕೇಷನ್ ಟ್ರಸ್ಟ್ ಗಳು  ಮಾದ್ಯಮದಲ್ಲಿ ಬಿತ್ತರಗೊಂಡಿರುವುದನ್ನು ಕಂಡು ಸಂಬಂಧಪಟ್ಟ ಕೇಂದ್ರಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ನಿಲ್ಲಿಸಲಾಗುವುದು ಎಂದು ಪರೀಕ್ಷಾಂಗದ ಕುಲಸಚಿವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಈ ಕೇಂದ್ರ ನಡೆಸುವವರಿಗೆ ಗೊತ್ತು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಹೇಗೆ ಪ್ರವೇಶ ಪಡೆದು ಅದನ್ನು ವಿವಿಯಲ್ಲಿ ಅನುಮೋದನೆಯನ್ನು ಪಡೆಯಬೇಕೆಂದು. ಕೋಟ್ಯಾಂತರ ರೂಪಾಯಿಗಳ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆದು ಅದನ್ನು ವಿವಿಗೆ ಕಟ್ಟದೇ ಪರೀಕ್ಷೆಗೆ ಅನುಮತಿಯನ್ನು ಪಡೆದು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ನಮ್ಮ ಪತ್ರಿಕೆ ಬೆನ್ನತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಸ್ತೃತ  ವರದಿಯನ್ನು ಸಾರ್ವಜನಿಕರ ಎದುರು ತೆರೆದಿಡಲಿದೆ.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್‍ನಾರಾಯಣರವರನ್ನು ನಮ್ಮ ಪೋರ್ಟಲ್‍ನ ಹಿರಿಯ ವರದಿಗಾರರು ಬೆಂಗಳೂರಿನಲ್ಲಿ ಸಂಪರ್ಕಿಸಿದಾಗ ಈ ಬಗ್ಗೆ ಸಂಬಂಧಪಟ್ಟ ವಿವಿಯ ಅಧಿಕಾರಿಗಳಿಂದ ವರದಿಯನ್ನು ತರಿಸಿಕೊಂಡು ಸೂಕ್ತ ಕ್ರಮಕ್ಕಾಗಿ ಹಾಗೂ ಅಂತಹ ಅಧ್ಯಯನ ಕೇಂದ್ರಗಳ ಮಾನ್ಯತೆಯನ್ನು ರದ್ದುಪಡಿಸಲು ಸೂಚಿಸುವುದಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಕುವೆಂಪು ವಿವಿಯ ದೂರಶಿಕ್ಷಣ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯಲ್ಲಿ ನಕಲು ಮಾಡಲು ಆಸ್ಪದ ನೀಡದಂತೆ ಅಧ್ಯಯನ ಕೇಂದ್ರಗಳ ಸಂಚಾಲಕರು ಮತ್ತು ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಕಳುಹಿಸಲಾಗಿರುತ್ತದೆ. ಬೇಲಿಯ ಎದ್ದು ಹೊಲ ಮೇಯ್ದರೆ ಯಾರೇನು ಮಾಡಲಾಗುತ್ತದೆ?

“ಸಂಬಂಧಪಟ್ಟ ವಿವಿಯಿಂದ ಈ ಬಗ್ಗೆ ವರದಿಯನ್ನು ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಅಂತಹ ಕೇಂದ್ರಗಳ ಮಾನ್ಯತೆಯನ್ನು ರದ್ದುಪಡಿಸಲು ಸೂಚಿಸಲಾಗುವುದು”

-ಡಾ.ಅಶ್ವಥ್‍ನಾರಾಯಣ್, ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ,ಬೆಂಗಳೂರು.

“ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ನಿಲ್ಲಿಸಲಾಗುವುದು’

– ಪ್ರೊ. ಎಂ. ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವರು,ಕುವಿವಿ

 

 


Spread the love

Related posts

ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯ ಕಲೆಯನ್ನು ಕಲಿತಲ್ಲಿ ಮತ್ತೊಬ್ಬರ ಪ್ರಾಣ ಉಳಿಸಬಹುದು – ಎಸ್.ಪಿ. ದಿನೇಶ್

Times fo Deenabandhu

ಶಾಸಕ ತನ್ವೀರ್ ಸೇಠ್ ಹಲ್ಲೆಯ ಹಿಂದಿತ್ತು ಈ ಕಾರಣ!

Times fo Deenabandhu

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ಗೆ ‘ಇದೆಲ್ಲ ಹೇಗೆ ಸಾಧ್ಯ?’ ಅಂತ ಪ್ರಶ್ನೆ ಮಾಡಿದ ಬಾಲಿವುಡ್ ನಟಿ ದಿಶಾ ಪಟಾನಿ!

Times fo Deenabandhu
non vel, elit. eleifend efficitur. ante. libero. mi, Donec elementum