Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಚೀನಾದಿಂದ ಭಾರತಕ್ಕೆ ಬರೋ ಪ್ರವಾಸಿಗರಿಗೆ ಬಾಗಿಲು ಬಂದ್

ಹೊಸದಿಲ್ಲಿ/ಬೀಜಿಂಗ್‌: ಕೊರೊನಾ ವೈರಾಣುವಿಗೆ ಬಲಿಯಾಗುತ್ತಿರುವವರ ಸಂಖ್ಯೆ ಚೀನಾದಲ್ಲಿ ದಿನೇ ದಿನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವೀಸಾ ನಿಯಮಗಳನ್ನು ಬಿಗಿಗೊಳಿಸಿದೆ. ಚೀನಾ ನಾಗರಿಕರು ಮತ್ತು ಚೀನಾಗೆ 2 ವಾರಗಳ ಮುನ್ನ ಭೇಟಿ ನೀಡಿದ ವಿದೇಶಿಗರ ವೀಸಾವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಈ ಮೂಲಕ ಚೀನಾದಿಂದ ಭಾರತಕ್ಕೆ ಬರುವವರನ್ನು ತಡೆಯುವ ಮೂಲಕ ಕೊರೊನಾ ಹಬ್ಬುವಿಕೆಗೆ ಅಂಕುಶ ಹಾಕಲು ಸರಕಾರ ಮುಂದಾಗಿದೆ.
ಚೀನಾ ನಾಗರಿಕರು ಮತ್ತು ಚೀನಾದಲ್ಲಿ ನೆಲೆಸಿದ ವಿದೇಶಿಗರಿಗೆ ಇ-ವೀಸಾ ವ್ಯವಸ್ಥೆಯನ್ನು ಫೆಬ್ರವರಿ 2ರಂದು ಸರಕಾರ ರದ್ದುಗೊಳಿಸಿತ್ತು. ಹೊಸ ವೀಸಾ ನಿಯಮ ಕುರಿತಾದ ಸಂಶಯಗಳು, ಸಮಸ್ಯೆಗಳು ಮತ್ತು ಅನಿವಾರ್ಯ ಭೇಟಿಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಟ್‌ಲೈನ್‌ವೊಂದನ್ನು ಆರಂಭಿಸಿದೆ. ಸಂಬಂಧಪಟ್ಟವರು 011-23978046 ನಂಬರ್‌ನ ಹಾಟ್‌ಲೈನ್ ಸಂಪರ್ಕಿಸಬಹುದಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ.
ಒಂದೇ ದಿನ 64 ಸಾವು: ಒಂದೇ ದಿನ 64 ಮಂದಿ ಕೊರೊನಾಗೆ ಬಲಿಯಾದ ಘಟನೆ ಚೀನಾದಲ್ಲಿ ವರದಿಯಾಗಿದೆ. ಇದರಿಂದಾಗಿ ಈವರೆಗೂ ಚೀನಾದಲ್ಲಿ ಮಾರಣಾಂತಿಕ ವೈರಾಣವಿನಿಂದ ಮೃತಪಟ್ಟವರ ಸಂಖ್ಯೆ 425 ತಲುಪಿದೆ. ಚೀನಾದಲ್ಲಿ ಸುಮಾರು 2,345 ಮಂದಿ ಹೊಸದಾಗಿ ಕೊರೊನಾ ಸೋಂಕು ತಗುಲಿರುವವರು ಪತ್ತೆಯಾಗಿದ್ದಾರೆ . ಈ ಮೂಲಕ 20,400ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ.
ಕೊರೊನಾ ಸೋಂಕಿತರು ಚೀನಾ ಹೊರತಾಗಿ ಸುಮಾರು 25 ದೇಶಗಳಲ್ಲಿ ಪತ್ತೆಯಾಗಿದ್ದಾರೆ. ಸದ್ಯ ವುಹಾನ್‌ ಹಾಗೂ ಹುಬೀ ಪ್ರಾಂತ್ಯಗಳಲ್ಲಿ ಸಿಲುಕಿದ್ದ 647 ಭಾರತೀಯರನ್ನು ವಿಶೇಷ ವಿಮಾನದ ಮೂಲಕ ಭಾರತ ತಾಯ್ನಾಡಿಗೆ ಸುರಕ್ಷಿತವಾಗಿ ಕರೆಸಿಕೊಂಡಿದೆ. ಅವರಿಗಾಗಿ ದಿಲ್ಲಿ ಸಮೀಪದ ಮನೇಸರ್‌ನಲ್ಲಿ 14 ದಿನಗಳ ತಾತ್ಕಾಲಿಕ ತಪಾಸಣಾ ಕೇಂದ್ರವನ್ನು ತೆರೆದು, ಎಲ್ಲರನ್ನೂ ಅಲ್ಲಿಯೇ ನಿಗಾದಲ್ಲಿ ಇರಿಸಲಾಗಿದೆ.

Related posts

ಲಾಕ್‌ಡೌನ್‌ ವಿಸ್ತರಣೆ ಇಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ

 ನಿಗಮ – ಮಂಡಳಿ ನೇಮಕ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ..!

 ಕೊರೊನಾ ಹಿನ್ನೆಲೆ ಜುಲೈ 31ರವರೆಗೆ ಶಿಕ್ಷಕರಿಗೆ ವರ್ಕ್ ಫ್ರಮ್‌ ಹೋಮ್