Times of Deenabandhu
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಬೆಟ್ಟದಷ್ಟು ನಿರೀಕ್ಷೆ: ಆರ್ಥಿಕ ಚೇತರಿಕೆಯ ಭರವಸೆ ನೀಡಬಲ್ಲದೇ ಬಜೆಟ್

ಮನೆಯ ಕಾಂಪೌಂಡ್‌ಗೆ ಸೈಕಲ್ ಒರಗಿಸಿ ಬೆವರು ಒರೆಸಿಕೊಂಡ ಶ್ರೀಕಂಠಪ್ಪ ಅವರ ಮುಖದಲ್ಲಿ ಮುಂದೇನು ಎಂಬ ಪ್ರಶ್ನೆಯಿತ್ತು. ಪ್ರತಿದಿನ ರಸ್ತೆ ತಿರುವು ತಲುಪಿದಾಗಲೇ ಬೆಲ್ ಮೊಳಗಿಸುವುದು ಅವರು ರೂಢಿಸಿಕೊಂಡ ಪದ್ಧತಿ. ಅದೇ ಬೆಲ್ ದನಿಯೇ ಮಕ್ಕಳು ಹೊಸಿಲ ಮೇಲೆ ಖುಷಿಯಿಂದ ನಿಲ್ಲಲು ಅಲಾರಾಂ ಸಹ ಆಗಿತ್ತು. ಆದರೆ ಅವತ್ತು ಬೆವರಿನಲ್ಲಿ ಬೆರೆತುಹೋಗಿದ್ದ ಕಣ್ಣೀರು ಮಕ್ಕಳಿಗೆ ಕಾಣಿಸಬಾರದೆಂಬ ಎಚ್ಚರಿಕೆಯೊಂದಿಗೆ ಅವರು ಮನೆಯೊಳಗೆ ಹೆಜ್ಜೆಯಿಟ್ಟಿದ್ದರು.

ಗುರುಗ್ರಾಮದಲ್ಲಿರುವ ಕಾರು ತಯಾರಿಸುವ ಕಂಪನಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯ ಒಂದಿಷ್ಟು ಸಣ್ಣ ಕೈಗಾರಿಕೆಗಳು ಬಿಡಿಭಾಗ ಪೂರೈಸುತ್ತವೆ. ಆರ್ಥಿಕ ಹಿಂಜರಿತದ ಹೊಡೆತಕ್ಕೆ ತತ್ತರಿಸಿ ಕಣ್ಮುಚ್ಚಿದ ಇಂಥದ್ದೊಂದು ಕೈಗಾರಿಕೆ ಶ್ರೀಕಂಠಪ್ಪ ಅವರ ಕೆಲಸವನ್ನೂ ಕಿತ್ತುಕೊಂಡಿತ್ತು. 50ರ ಆಸುಪಾಸಿನ ಅವರಿಗೆ ಈಗ ಹೊಸ ಕೆಲಸ ಹುಡುಕುವ ಸಂಕಷ್ಟ. ಕೆಲಸ ಸಿಗುವುದು ತಡವಾದರೆ ಸಂಸಾರ ನಡೆಸುವುದು ಹೇಗೆಂಬ ಪ್ರಶ್ನೆ. ಅದೆಲ್ಲದರ ಜೊತೆಗೆ ಫೆಬ್ರುವರಿ 1ರ ಬಜೆಟ್‌ನಲ್ಲಿ ಏನಾದರೂ ಮ್ಯಾಜಿಕ್ ಆಗಿ, ಮುಚ್ಚಿಹೋದ ಕೈಗಾರಿಕೆಯ ಬಾಗಿಲು ತೆರೆದೀತು ಎಂಬ ನಿರೀಕ್ಷೆ.

ಕಣ್ಣೀರು ಅಡಗಿಸಿಕೊಂಡ ಇಂಥ ಲಕ್ಷಾಂತರ ಬೆವರುಜೀವಿಗಳ ನಿರೀಕ್ಷೆಯ ಭಾರ ಹೊತ್ತು ಸಿದ್ಧವಾಗುತ್ತಿದೆ ಈ ವರ್ಷದ ಬಜೆಟ್. ದೇಶದ ಆರ್ಥಿಕ ಇತಿಹಾಸದಲ್ಲಿಯೇ ಜನರು ಬಜೆಟ್‌ಗಾಗಿ ಇಷ್ಟು ಕಾತರದಿಂದ ಎಂದೂ ಕಾದಿದ್ದಿಲ್ಲ ಎಂದು ಹಿರಿಯರು ಹೇಳುತ್ತಿದ್ದಾರೆ. ಕುಸಿಯುತ್ತಿರುವ ಆರ್ಥ ವ್ಯವಸ್ಥೆಗೆ ಜೀವ ತುಂಬಿ, ಇಂದಲ್ಲದಿದ್ದರೆ ನಾಳೆ ಒಳ್ಳೇ ದಿನ ಬಂದೇ ಬರುತ್ತೆ ಎಂಬ ಭರವಸೆಯನ್ನು ಜನರಲ್ಲಿ ತುಂಬಬಲ್ಲ ಬಜೆಟ್‌ ಮಂಡಿಸುತ್ತಾರೆಯೇ ನಿರ್ಮಲಾ ಸೀತಾರಾಮನ್ ಎಂದು ಜನರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ದೇಶದ ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಚೆನ್ನಾಗಿಲ್ಲ. ಅರಗಿಸಿಕೊಳ್ಳಲು ಕಹಿ ಎನಿಸಿದರೂ ಇದು ಒಪ್ಪಿಕೊಳ್ಳಲೇಬೇಕಾದ ಸತ್ಯ.
ಒಂದೊಳ್ಳೆ ಬಜೆಟ್‌ ಹೇಗಿರುತ್ತೆ?

ಇದು ಈ ಕ್ಷಣದ ಕೋಟಿ ರೂಪಾಯಿ ಪ್ರಶ್ನೆ. ಈ ಒಳ್ಳೇದು ಎನ್ನುವುದು ಅವರವರ ಭಾವಕ್ಕೆ ತಕ್ಕಂಥ ಉತ್ತರ ಬೇಡುವ ಪ್ರಶ್ನೆ ಆಗಿರುವುದರಿಂದ ಈ ಪ್ರಶ್ನೆಗೆ ಸಿಗುವ ಉತ್ತರವೂ ಹತ್ತಾರು ಬಗೆಯದ್ದು. ಅದಕ್ಕೆ ಸಿಗುವ ಉತ್ತರ ಹೆಚ್ಚಿನ ಸಂದರ್ಭಗಳಲ್ಲಿ ನಾವು ಯಾರಿಗೆ ಈ ಪ್ರಶ್ನೆ ಕೇಳುತ್ತಿದ್ದೇವೆ ಎನ್ನುವುದನ್ನು ಆಧರಿಸಿರುತ್ತದೆ.

ಅರ್ಥಶಾಸ್ತ್ರಜ್ಞರಿಗೆ ಅಂಕಿಅಂಶಗಳ ಮೇಲೆ ಹೆಚ್ಚು ನಂಬುಗೆ, ಕೈಗಾರಿಕೋದ್ಯಮಿಗಳಿಗೆ ತಮ್ಮ ವ್ಯವಹಾರ ಪ್ರಭಾವಿಸುವ ಕ್ಷೇತ್ರಗಳ ಬಗ್ಗೆಯೇ ಹೆಚ್ಚು ಆಸಕ್ತಿ. ಇದೇ ರೀತಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ವೈದ್ಯರು, ಸಾಫ್ಟ್‌ವೇರ್ ಕ್ಷೇತ್ರದ ತಂತ್ರಜ್ಞರು… ಎಲ್ಲರೂ ಅವರವರ ಮೂಗಿನ ನೇರಕ್ಕೇ ಉತ್ತರ ಕೊಡುತ್ತಾರೆ.

ಆದರೆ ಸರ್ಕಾರವನ್ನು ಮುನ್ನಡೆಸುವ ಸ್ಥಾನದಲ್ಲಿರುವವರು ಮಾತ್ರ ಎಲ್ಲರ ಅಭಿಪ್ರಾಯ ಕೇಳಿ, ಪ್ರಸ್ತುತ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು, ಭವಿಷ್ಯದ ಲೆಕ್ಕಾಚಾರ ಹಾಕಿ ನಾಜೂಕು ಹೆಜ್ಜೆ ಇಡಬೇಕಾಗುತ್ತದೆ. ಈ ಬಾರಿಯಂತೂ ಬಜೆಟ್ ಮಾಡುವವರು ಅಂಕಿಅಂಶಗಳಲ್ಲಿ ಕಣ್ಣುನೆಟ್ಟ ಒಣ ಅರ್ಥಶಾಸ್ತ್ರಜ್ಞರಾಗಿದ್ದರೆ ಪ್ರಯೋಜನವಿಲ್ಲ. ಆ ಅಂಕಿಆಂಶಗಳ ತಿರುಳನ್ನು ತಾಯಿಕರುಳಿನಿಂದ ವಿಶ್ಲೇಷಿಸಬಲ್ಲ ಮಾನವೀಯ ನೆಲೆಯ ಬಜೆಟ್‌ ದೇಶಕ್ಕೆ ಬೇಕಿದೆ.

ಭಾರತ ಪಾಲಿಗೆ ಬಜೆಟ್ ಎಂಬುದು ಕೇವಲ ಅಂಕಿಅಂಶಗಳ, ತಾರ್ಕಿಕ ಲೆಕ್ಕಾಚಾರದ ಆಡುಂಬೋಲವಷ್ಟೇ ಅಲ್ಲ. ಬೃಹತ್ ಅಂಕಿಅಂಶಗಳ ಕಂತೆಯಲ್ಲಿ ಅಡಗಿರುವ ಆಶಯವನ್ನೇ ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಾರೆ. ಅದು ವಿಶ್ವದ ಬೃಹತ್ ಪ್ರಜಾಪ್ರಭುತ್ವ ದೇಶವೊಂದರ ಮುಂದಿನ ಒಂದಿಡೀ ವರ್ಷದ ನಡೆಯನ್ನು ನಿರ್ಧರಿಸುವ ಮಹತ್ವದ ದಿನ.ದೇಶದ ಇತಿಹಾಸವನ್ನು ಬದಲಿಸಿದ ಹಲವು ನಿರ್ಧಾರಗಳನ್ನು ಭಾರತ ಬಜೆಟ್ ಮೂಲಕವೇ ವಿಶ್ವಕ್ಕೆ ಸಾರಿಹೇಳಿದೆ. ನಮ್ಮ ಮಾರುಕಟ್ಟೆಯ ದಿಡ್ಡಿ ಬಾಗಿಲನ್ನು ವಿಶ್ವಕ್ಕೆ ತೆರೆದಿಟ್ಟ 1991ರ ಮನಮೋಹನ್ ಸಿಂಗ್ ಬಜೆಟ್ ಇದಕ್ಕೆ ಅತ್ಯುತ್ತಮ ಸಾಕ್ಷಿ. ಸ್ವಯಂ ಘೋಷಣೆಯನ್ನು ಆರ್ಥಿಕತೆಯ ಭಾಗವಾಗಿಸಿ, ಭಾರತೀಯರ ಉದ್ಯಮಶೀಲತೆಗೆ ಬೆನ್ನುತಟ್ಟಿದ 1968ರ ಮೊರಾರ್ಜಿ ದೇಸಾಯಿ ಬಜೆಟ್‌ ವಿಚಾರವನ್ನೂ ಕೆಲ ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. 1973ರ ಬಜೆಟ್‌ನಲ್ಲಿ ವೈ.ಬಿ.ಚವಾಣ್ ಕಲ್ಲಿದ್ದಲು ಗಣಿಗಳ ರಾಷ್ಟ್ರೀಕರಣ ಘೋಷಿಸಿದರು. 1997ರ ಬಜೆಟ್ ಮೂಲಕ ಪಿ.ಚಿದಂಬರಂ ಭಾರತೀಯ ಆರ್ಥಿಕತೆಯ ದಿಗಂತ ವಿಸ್ತರಿಸುವ ಕನಸು ಬಿತ್ತಿದರು. 1998ರಿಂದ 2002ರವರೆಗೆ ವಿತ್ತ ಸಚಿವರಾಗಿದ್ದ ಯಶವಂತ್ ಸಿನ್ಹಾ ದೂರಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವುದರ ಜೊತೆಗೆ ಪೆಟ್ರೋಲಿಯಂ ಕ್ಷೇತ್ರದಲ್ಲಿ ಸರ್ಕಾರದ ಹಿಡಿತ ಸಡಿಲಿಸಿದರು. ಹೀಗೆ ಪ್ರತಿ ಬಜೆಟ್‌ಗೂ ತನ್ನದೇ ಆಶಯವೊಂದು ಇದ್ದೇ ಇರುತ್ತದೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಡಿಜಿಟಲ್ ಇಂಡಿಯಾ, ಸ್ಮಾರ್ಟ್‌ ಸಿಟಿ ಯೋಜನೆಗಳ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪ್ರಧಾನ ಮಂತ್ರಿ ಉಜ್ವಲ ಯೋಜನಾ, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ, ಸ್ವಚ್ಛ ಭಾರತ ಅಭಿಯಾನ ಇತ್ಯಾದಿ ವಿಚಾರಗಳು ಬಜೆಟ್ ಭಾಷಣಗಳಲ್ಲಿ ಎದ್ದು ಕಾಣಿಸುತ್ತಿದ್ದವು. ಮೋದಿ ಸರ್ಕಾರವು ಎರಡನೇ ಅವಧಿಗೆ ಅಧಿಕಾರ ಭದ್ರಪಡಿಸಿಕೊಂಡ ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮೊದಲ ಬಜೆಟ್‌ನಲ್ಲಿ 2024ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ವಿಸ್ತರಿಸುವ ಕನಸು ಬಿತ್ತಲಾಯಿತು. ನಮ್ಮ ಅರ್ಥ ಸಚಿವರು ಈ ಕನಸು ಹಂಚಿಕೊಂಡಾಗ ನಮ್ಮ ಆರ್ಥಿಕತೆಯ ಗಾತ್ರ ಇದ್ದುದು 2.75 ಲಕ್ಷ ಕೋಟಿ ಡಾಲರ್ ಮಾತ್ರ.

ನಿರ್ಮಲಾ ಅವರು ಈ ಕನಸು ಬಿತ್ತಿದ ಕೆಲವೇ ತಿಂಗಳ ಅವಧಿಯಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಎನ್ನುವುದು ಎಂದಿಗೂ ನನಸಾಗದ ಕನ್ನಡಿಯೊಳಗಿನ ಗಂಟು ಎಂಬಷ್ಟು ದೂರವಿರುವಂತೆ ಭಾಸವಾಗುತ್ತಿದೆ. ಕಳೆದ ಆರು ತ್ರೈಮಾಸಿಕಗಳಿಂದ (ಒಂದೂವರೆ ವರ್ಷಗಳಿಂದ) ಭಾರತದ ಆರ್ಥಿಕತೆ ಸತತ ಕುಸಿಯುತ್ತಿದೆ. 2019–20ರ ಆರ್ಥಿಕ ವರ್ಷ ಮುಗಿಯುವ ಹೊತ್ತಿಗೆ ಜಿಡಿಪಿ ಪ್ರಗತಿ ಶೇ 5ಕ್ಕಿಂತಲೂ ಕೆಳಗಿಳಿಯಬಹುದು ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.

ನಿರ್ಮಲಾ ಹೇಳಿದಂತೆ 2024ರ ವೇಳೆಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ದೇಶವಾಗಲು ಭಾರತ ಪ್ರತಿ ವರ್ಷ ಶೇ 9ರಷ್ಟು ಜಿಡಿಪಿ ಪ್ರಗತಿ ಕಾಯ್ದುಕೊಳ್ಳಬೇಕು ಎಂದು ಪ್ರತಿಷ್ಠಿತ ಹಣಕಾಸು ಸಲಹಾ ಸಂಸ್ಥೆ ಅರ್ನಸ್ಟ್‌ ಅಂಡ್ ಯಂಗ್ ಗ್ಲೋಬಲ್ ಲಿಮಿಟೆಡ್ (ಇವೈ) ಅಂದಾಜು ಮಾಡಿತ್ತು.ಸರ್ಕಾರದ ಸಂದೇಶಗಳು ಮತ್ತು ನೆಲದ ವಾಸ್ತವಗಳು ಸಂಪೂರ್ಣ ಭಿನ್ನವಾಗಿರುವುದೇ ನಮ್ಮ ಅರ್ಥ ವ್ಯವಸ್ಥೆ ಈಗ ಎದುರಿಸುತ್ತಿರುವ ಬಹುತೇಕ ಗೊಂದಲಗಳಿಗೆ ಇರುವ ಮುಖ್ಯ ಕಾರಣ. ಹೀಗಾಗಿಯೇ ಈ ಬಾರಿಯ ಬಜೆಟ್‌ ಭಾಷಣದಲ್ಲಿ ಹೊಸ ಬೆಳಕಿನ ಕೈದೀವಿಗೆಯನ್ನು ಜನರು ಹುಡುಕುತ್ತಿದ್ದಾರೆ. ಬಜೆಟ್ ಭಾಷಣ ಮತ್ತು ನಂತರದ ಚರ್ಚೆಯಲ್ಲಿ ಸಚಿವರು ಮತ್ತು ಸಂಸದರು ಬಳಸುವ ಪ್ರತಿ ಪದಕ್ಕೂ ತೂಕವಿದೆ. ಸರ್ಕಾರದ ಮುಂದಿನ ಆರ್ಥಿಕ ನಡೆ, ನೀತಿ ನಿರೂಪಣೆಯಲ್ಲಿ ಈವರೆಗೆ ಆಗಿರುವ ಲೋಪಗಳಿಗೆ ಪರಿಹಾರ, ಖಾಸಗಿ ಹೂಡಿಕೆ ಬಗ್ಗೆ ಸ್ಪಷ್ಟ ನಿಲುವು, ಪ್ರಗತಿಯ ಖಾತ್ರಿಗೆ ಹೊಸ ಯೋಜನೆಗಳ ಘೋಷಣೆಯ ದಾಖಲೆಯಾಗಿ ಈ ಬಾರಿಯ ಬಜೆಟ್‌ಗೆ ಪ್ರಾಮುಖ್ಯತೆ ಇದೆ.

ಈಚಿನ ದಿನಗಳಲ್ಲಿ ಸರ್ಕಾರ ಕೆಲ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಟ್ಟಿದೆ. ವಿಮಾನಯಾನ, ಆಹಾರ ಸಂಸ್ಕರಣೆ, ರಕ್ಷಣಾ ಕೈಗಾರಿಕೆಗಳು, ಔಷಧ ತಯಾರಿಕೆಯಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ 2015ರಲ್ಲಿ ಅವಕಾಶ ಕಲ್ಪಿಸಿಕೊಡಲಾಯಿತು. ಇದು ಆಶಯ. ಆದರೆ ಇದಾದ ನಾಲ್ಕು ವರ್ಷಗಳ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ. ಇದು ವಾಸ್ತವ.

2015ರಲ್ಲಿ ಹೊಸ ಯೋಜನೆಗಳಿಗಾಗಿ ಭಾರತಕ್ಕೆ 60 ಶತಕೋಟಿ ಡಾಲರ್‌ ವಿದೇಶಿ ಸಾಂಸ್ಥಿಕ ಹೂಡಿಕೆ ಘೋಷಣೆಯಾಗಿತ್ತು. ಆದರೆ 2018ರಲ್ಲಿ ಆ ಸಂಖ್ಯೆ 55 ಶತಕೋಟಿ ಡಾಲರ್‌ಗೆ ಕುಸಿಯಿತು. ಈ ಅವಧಿಯಲ್ಲಿ ಚೀನಾ 107 ಶತಕೋಟಿ ಡಾಲರ್ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಆಶಯಕ್ಕೂ ವಾಸ್ತವಕ್ಕೂ ಇರುವ ಅಂತರ ಈಗ ಅರ್ಥವಾಯಿತೆ?

ಅನುಷ್ಠಾನದ ಲೋಪಗಳು

ಸರ್ಕಾರದ ಪ್ರಮುಖ ಯೋಜನೆಗಳ ವಿವರಣೆಯನ್ನು ಸರ್ಕಾರ ಬಹಳ ಸುಂದರವಾಗಿ ಕಟ್ಟಿಕೊಡುತ್ತದೆ. ಆದರೆ ಅವುಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ವಿಚಾರದಲ್ಲಿ ಮಾತ್ರ ಅಕ್ಷರಶಃ ಎಡವಿದೆ.

ಸರಕು ಮತ್ತು ಸೇವಾ ತೆರಿಗೆ ಜಾರಿ (ಜಿಎಸ್‌ಟಿ) ಜಾರಿ ಮಾಡಿದಾಗ ಅದನ್ನು ಉತ್ತಮ ಮತ್ತು ಸರಳ ತೆರಿಗೆ (ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್), ತೆರಿಗೆ ವ್ಯವಸ್ಥೆಯ ಹಲವು ಲೋಪ ಮತ್ತು ಗೊಂದಲಗಳಿಗೆ ಉತ್ತರ ಎಂಬ ವಿವರಣೆ ನೀಡಲಾಗಿತ್ತು. ಆದರೆ ಅನುಷ್ಠಾನದ ಲೋಪಗಳು, ಜಾಗೃತಿ ಅಭಿಮಾನದ ವೈಫಲ್ಯ, ಕೆಟ್ಟ ಪೋರ್ಟಲ್, ಆಡಳಿತಾತ್ಮಕ ಸಮಸ್ಯೆಗಳು, ಪದೇಪದೆ ಬದಲಾದ ತೆರಿಗೆ ನೀತಿಗಳಿಂದಾಗಿ ಅದು ಅತ್ಯಂತ ಕೆಟ್ಟ ಮತ್ತು ಸಂಕೀರ್ಣ ತೆರಿಗೆಯಾಗಿ ಮಾರ್ಪಾಟಾಯಿತು. ಅಪ್ರಬುದ್ಧ ರೀತಿಯಲ್ಲಿ ಅನುಷ್ಠಾನಗೊಂಡ ಜಿಎಸ್‌ಟಿಯಿಂದಾಗಿ ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಿಗಳು ತತ್ತರಿಸಿದರು. ತೆರಿಗೆ ಮೂಲಕ ಸರ್ಕಾರಕ್ಕೆ ಸಂಗ್ರಹವಾಗಬೇಕಿದ್ದ ಆದಾಯಕ್ಕೂ ಹೊಡೆತ ಬಿತ್ತು.
ಸರ್ಕಾರದ ಸಾಧ್ಯತೆಗಳಿಗೂ ಮಿತಿಯಿದೆ

ದೇಶವಾಸಿಗಳ ನಿರೀಕ್ಷೆಯ ಭಾರ ಹೊತ್ತ ಬಜೆಟ್‌ಗೆ ಭರವಸೆ ಈಡೇರಿಸಲು ಸಾಧ್ಯವಾಗುವುದು ಕಷ್ಟ. ಈಗ ದೇಶ ಎದುರಿಸುತ್ತಿರುವ ಸಂದಿಗ್ಧ ಸ್ಥಿತಿಯಿಂದ ಹೊರಬರಲು ಇರುವ ಅವಕಾಶಗಳ ಮಿತಿಯೇ ಅದಕ್ಕಿರುವ ಮುಖ್ಯ ಕಾರಣ. ಆರ್ಥಿಕತೆ ಸುಧಾರಿಸಲು ಸರ್ಕಾರ ಮಾಡುವ ವೆಚ್ಚ ಹೆಚ್ಚಾಗಬೇಕು ಎಂಬ ದೊಡ್ಡ ಕೂಗು ಕೇಳಿಬರುತ್ತಿದೆ. ಒಂದು ವೇಳೆ ಹೀಗೆ ಮಾಡಿದರೆ ಸರ್ಕಾರವು ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡುವ ಖರ್ಚು ಹೆಚ್ಚಾಗುತ್ತದೆ. ಇಂಥ ನಿರ್ಧಾರದಿಂದ ಸಹಜವಾಗಿಯೇ ಸರ್ಕಾರದ ಆದಾಯ ಮತ್ತು ಖರ್ಚಿನ ನಡುವಣ ಅಂತರ (ವಿತ್ತೀಯ ಕೊರತೆ) ದೊಡ್ಡದಾಗುತ್ತದೆ. ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ ಸರ್ಕಾರ ದೊಡ್ಡಮಟ್ಟದಲ್ಲಿ ಇಂಥ ಕ್ರಮಕ್ಕೆ ಮುಂದಾಗುವುದು ಅನುಮಾನ.

ಸರ್ಕಾರದ ಸಾಲಪತ್ರಗಳು ಅಥವಾ ಬಾಂಡ್‌ಗಳನ್ನು ರಿಸರ್ವ್‌ ಬ್ಯಾಂಕ್‌ಗೆ ಮಾರಾಟ ಮಾಡುವ ಮೂಲಕ ಅಗತ್ಯ ಬಂಡವಾಳ ಸಂಚಯಿಸಬಹುದು ಎಂದು ಕೆಲ ನೀತಿ ನಿರೂಪಕರು ಸಲಹೆ ನೀಡುತ್ತಿದ್ದಾರೆ. ಈ ಹಣವನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಂಥವುಗಳ ವ್ಯಾಪ್ತಿ ಹಿಗ್ಗಿಸಲು ಬಳಸಿದರೆ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ವೃದ್ಧಿಸಿ, ಆರ್ಥಿಕತೆ ದೊಡ್ಡ ಮಟ್ಟದಲ್ಲಿ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.

ರಿಸರ್ವ್‌ ಬ್ಯಾಂಕ್‌ನಲ್ಲಿ ಈ ಹಿಂದೆ ಗವರ್ನರ್ ಆಗಿದ್ದ ಡಿ.ಸುಬ್ಬರಾವ್ ಈ ವಾದವನ್ನು ಒಪ್ಪುವುದಿಲ್ಲ. ‘ಭಾರತದಲ್ಲಿ ಈಗ ಹೂಡಿಕೆ ಹೆಚ್ಚಾಗಲು ಗಮನಕೊಡಬೇಕು. ಬೇಡಿಕೆ ಹೆಚ್ಚಿಸುವುದರಿಂದ ಅಷ್ಟೇನೂ ಉಪಯೋಗವಾಗದು. ನಿಧಾನಗತಿ ಎನ್ನುವುದು ಈಗ ಭಾರತದ ಆರ್ಥಿಕತೆಯ ಭಾಗವಾಗಿಯೇ ಕಾಣಿಸುತ್ತಿದೆ. ಇದನ್ನು ಆರ್ಥಿಕ ಆವೃತ್ತದ ಹಿಂಜರಿಕೆ ಎಂದು ಪರಿಗಣಿಸಲು ಆಗುವುದಿಲ್ಲ. ಬೇಡಿಕೆ ವೃದ್ಧಿಸುವುದರಿಂದ ಅದನ್ನು ಸರಿಪಡಿಸಬಹುದು ಎಂದುಕೊಳ್ಳುವುದು ಸರಿಯಲ್ಲ’ ಎನ್ನುತ್ತಾರೆ ಅವರು.

ಸುಧಾರಣೆ ಹೇಗೆ?

ಈ ಹಿಂದೆ ಭಾರತದಲ್ಲಿ ಹೂಡಿಕೆ ಮತ್ತು ರಫ್ತು ವಲಯದಲ್ಲಿ ಹಿಂಜರಿಕೆ ಕಂಡು ಬಂದಾಗ ದೇಶೀ ಬಳಕೆ ಮತ್ತು ಬೇಡಿಕೆ ಆರ್ಥಿಕತೆಯನ್ನು ಕುಸಿಯದಂತೆ ಕಾಪಾಡುತ್ತಿತ್ತು. 1991 ಮತ್ತು 2008ರಲ್ಲಿ ಹೆಚ್ಚುಕಡಿಮೆ ಇಂಥ ವಿದ್ಯಮಾನಗಳು ಕಂಡುಬಂದಿದ್ದವು. ‘ದೇಶೀ ಬೇಡಿಕೆ ವೃದ್ಧಿಯಿಂದ ಆರ್ಥಿಕತೆ ಸುಧಾರಿಸಬಹುದು’ ಎನ್ನುವ ಹಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯದ ಹಿಂದಿರುವುದು ಸಹ ಇಂಥದ್ದೇ ತರ್ಕ.

Related posts

ಕರ್ನಾಟಕ ಲೋಕಸೇವಾ ಆಯೋಗವು ಐಚ್ಛಿಕ ಕನ್ನಡವನ್ನು ರದ್ದು ಮಾಡದಿರಲಿ: ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

Times fo Deenabandhu

ಕರ್ನಾಟಕದಲ್ಲಿ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು

Times fo Deenabandhu

ನಾವೆಲ್ಲ ಒಂದೇ ದೇಶದವರು, ಒಟ್ಟಾಗಿ ದೇಶ ಕಟ್ಟೋಣ: ಅಜಿತ್ ಡೊಭಾಲ್

Times fo Deenabandhu