Times of Deenabandhu
  • Home
  • ಜಿಲ್ಲೆ
  • ಸಿಎಎ, ಎನ್‌ಆರ್‌ಸಿ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಜಿಲ್ಲೆ ಶಿವಮೊಗ್ಗ

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಶಿವಮೊಗ್ಗ: ಸಂವಿಧಾನ ವಿರೋಧಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕರಾಳ ಕಾಯ್ದೆಗಳನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಜನಾಗ್ರಹ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪೌರತ್ವ ತಿದ್ದುಪಡಿ ಕಾಯ್ದೆ ಪ್ರಜಾಪ್ರಭುತ್ವವನ್ನು ನಾಶ ಮಾಡುವುದಲ್ಲದೇ ಮನುಧರ್ಮ ಶಾಸ್ತ್ರವನ್ನು ಎತ್ತಿ ಹಿಡಿಯುತ್ತದೆ. ತಮಗಿಷ್ಟ ಬಂದಂತೆ ಸಂವಿಧಾನದ ಮೇಲೆ ನರ್ತನ ಮಾಡಲು ಈ ಕಾಯ್ದೆ ಸಹಾಯ ಮಾಡುತ್ತದೆ. ಇದಕ್ಕೆ ಮನುವಾದಿಗಳು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಭಾರತದಲ್ಲಿ ನೂರಾರು ವರ್ಷಗಳಿಂದ ನಮ್ಮ ತಾತ, ಮುತ್ತಾತ, ಪೋಷಕರು ನೆಲೆಸಿದ್ದಾರೆ. ನಾವು ಇಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಕಾರ್ಡ್, ಪಾಸ್‌ಪೋರ್ಟ್ ಹೊಂದಿದ್ದೇವೆ. ಮತ್ತು ಅಧಿಕೃತವಾಗಿ ಇಲ್ಲಿನ ಪೌರರೆಂದು ಪರಿಗಣಿಸಲಾಗಿದೆ. ಹೀಗಿದ್ದ ಮೇಲೆ ನಮ್ಮ ಪೌರತ್ವವನ್ನು ಪ್ರಶ್ನಿಸಲು ಪ್ರಭುತ್ವಕ್ಕೆ ಯಾವ ಅಧಿಕಾರವೂ ಇಲ್ಲ. ಎನ್‌ಆರ್‌ಸಿ ಈ ಎಲ್ಲಾ ದಾಖಲೆಗಳನ್ನು ಆಧಾರಿಸಿ, ಸ್ಥಳೀಯ ಪ್ರದೇಶಕ್ಕೆ ಎನ್‌ಆರ್‌ಸಿ ಕರಡನ್ನು ತಯಾರಿಸುತ್ತಾರೆ. ಕಡೆಯದಾಗಿ ಅಂತಿಮ ಎನ್‌ಆರ್‌ಸಿ ಪ್ರಕಟಿಸುತ್ತಾರೆ. ಇದರಿಂದಾಗಿ ಎನ್‌ಆರ್‌ಸಿಗೂ ಮತ್ತು ಎನ್‌ಪಿಆರ್‌ಗೂ ಸಂಬಂಧವೇ ಇಲ್ಲ. ಆದ್ದರಿಂದ ಈ ಮೂರು ಕಾಯ್ದೆಗಳನ್ನು ಜಾರಿಯಾಗದಂತೆ ತಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್. ಹಾಲೇಶಪ್ಪ, ಎ.ಡಿ. ಆನಂದ್, ಎಂ.ಆರ್. ಶಿವಕುಮಾರ್ ಆಸ್ತಿ, ಬಿ.ಕೆ. ಹನುಮಂತಪ್ಪ, ಪಳನಿ, ಎಲ್. ರಂಗಸ್ವಾಮಿ, ಮಹಮ್ಮದ್ ನಿಹಾಲ್, ಸಲೀಂಖಾನ್, ನಾಸೀರ್ ಅಹ್ಮದ್, ಇಮ್ತೀಯಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

ಪರಿಹಾರ ನೀಡದೆ ವಂಚನೆ

ಶಿವಮೊಗ್ಗ: ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ಆಸ್ಪತ್ರೆಗಳ ಅಲೆದಾಡಿ ಸಂಕಟಪಟ್ಟು ಈಗ ಮತ್ತೆ ಕೆಲಸಕ್ಕೆ ಹೋದರೆ ಕೆಲಸವನ್ನು ಕೊಡದೇ, ಪರಿಹಾರವನ್ನು ನೀಡದೇ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ದಿನಗೂಲಿ ನೌಕರ ಜಹೀರ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜಹೀರ್, ತಾವು ೨೦೧೭ರ ಅಕ್ಟೋಬರ್ ೧೬ ರಂದು ಕುಂಸಿ ಅರಣ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಾಗ ಕೊಳಕುಮಂಡಲ ಎಂಬ ವಿಷದ ಹಾವು ನನ್ನನ್ನು ಕಚ್ಚಿತ್ತು. ಮೆಗ್ಗಾನ್ ಆಸ್ಪತ್ರೆಗೆ ದಾಖಲಾದರೂ ಕೂಡ ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದೇ ನಂಜಪ್ಪ ಆಸ್ಪತ್ರೆಗೆ ಸಾಗಿಸಲಾಯಿತು. ಏರಿದ ನಂಜಿನಿಂದ ದೇಹದ ಅಂಗಾಂಗಗಳೆಲ್ಲ ತೊಂದರೆಗೆ ಒಳಗಾದವು. ಕಣ್ಣು ಸರಿಯಾಗಿ ಕಾಣಿಸಲಿಲ್ಲ. ಕೈಕಾಲುಗಳು ಶಕ್ತಿ ಕಳೆದುಕೊಂಡರು. ಶಸ್ತ್ರ ಚಿಕಿತ್ಸೆಯೂ ಆಯಿತು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರೂ ಕೂಡ ಮತ್ತೆ ಆಸ್ಪತ್ರೆಗೆ ಹೋಗುವುದು ತಪ್ಪಲಿಲ್ಲ. ಈಗಲೂ ಆಸ್ಪತ್ರೆಗೆ ಹೋಗುತ್ತಲೇ ಇದ್ದೇನೆ ಎಂದು ಅಳುತ್ತಲೇ ಹೇಳಿದರು.

ಈಗ ನನಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೆಲಸ ನೀಡುತ್ತಿಲ್ಲ. ಹೋಗಲೀ ಪರಿಹಾರ ಕೊಡುತ್ತಿಲ್ಲ. ನನ್ನ ಕುಟುಂಬದಲ್ಲಿ ದುಡಿಯುತ್ತಿದ್ದದು ನಾನೊಬ್ಬನೇ. ನನಗೆ ೪ ಜನ ಮಕ್ಕಳು. ಹೆಂಡತಿ ಕೂಡ ಕೂಲಿ ಕೆಲಸ. ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಲು ಕೂಡ ತೊಂದರೆಯಾಗುತ್ತಿದೆ. ಇಷ್ಟಾದರೂ ಇಲಾಖೆಯಾಗಲೀ, ಸರ್ಕಾರವಾಗಲೀ ನನ್ನ ಕಷ್ಟ ಕೇಳುತ್ತಿಲ್ಲ, ಅನುಕಂಪ ತೋರುತ್ತಿಲ್ಲ ಎಂದರು.

೨೦೧೭ರಿಂದ ಇಲ್ಲಿಯತನಕ ಜಿಲ್ಲಾಧಿಕಾರಿ ಕಚೇರಿಗೆ, ಅರಣ್ಯ ಇಲಾಖೆಗೆ ಓಡಾಡುತ್ತಲೇ ಇದ್ದೇನೆ. ಕೆಲಸ ಅಥವಾ ಪರಿಹಾರ ನೀಡುವಂತೆ ಮನವಿ ಮಾಡುತ್ತಲೇ ಇದ್ದೇನೆ. ಇಲಾಖೆ ನನಗೆ ೫ ಲಕ್ಷ ಪರಿಹಾರ ನೀಡುವುದಾಗಿ ಮತ್ತು ನೌಕರಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ೨ ವರ್ಷವಾದರೂ ಏನನ್ನು ನೀಡಿಲ್ಲ. ಮಾಜಿ ಸಚಿವ ಕಾಗೋಡುತಿಮ್ಮಪ್ಪನವರು ಕೂಡ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದು ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಆದರೂ ಕೂಡ ಪರಿಹಾರ ಸಿಕ್ಕಿಲ್ಲ. ನನಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ಪೀಸ್ ಆರ್ಗನೈಜೇಷನ್‌ನ ಮುಖ್ಯಸ್ಥ ರಿಯಾಜ್ ಅಹಮ್ಮದ್ ಮಾತನಾಡಿ, ಜಹೀರ್ ಜೀವನದಲ್ಲಿ ತುಂಬಾ ನೊಂದುಕೊಂಡಿದ್ದಾರೆ. ಕೊಳಕುಮಂಡಲ ಹಾವು ಕಚ್ಚಿ ಶಸ್ತ್ರಚಿಕಿತ್ಸೆ ಮಾಡಿಸಿದ್ದರೂ ಕೂಡ ಸಂಪೂರ್ಣ ಗುಣಮುಖನಾಗಿಲ್ಲ. ಇತ್ತ ಅರಣ್ಯ ಇಲಾಖೆ ಕೆಲಸಕ್ಕೂ ಸೇರಿಸಿಕೊಂಡಿಲ್ಲ. ಪರಿಹಾರ ಕೊಟ್ಟಿಲ್ಲ. ಜಹೀರ್ ಬಡಕುಟುಂಬದವನಾಗಿದ್ದಾನೆ. ಅವನಿಗೆ ೪ ಜನ ಮಕ್ಕಳಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅರಣ್ಯ ಇಲಾಖೆ ಅಥವಾ ಜಿಲ್ಲಾಡಳಿತ ಅಥವಾ ಸರ್ಕಾರ ಆತನಿಗೆ ಕನಿಷ್ಟ ೫ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಅರಣ್ಯ ಇಲಾಖೆ ಅಥವಾ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಅರಣ್ಯ ಇಲಾಖೆ ಎದುರು ಜಹೀರ್ ಕುಟುಂಬಸಹಿತ ನಮ್ಮ ಸಂಸ್ಥೆಯ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಹೀರ್ ಪತ್ನಿ ಮತ್ತು ಮಕ್ಕಳು ಹಾಗೂ ಸಂಬಂಧಿಕರಾದ ಸಮೀವುಲ್ಲ ಇದ್ದರು.

ಬಾಂಬ್ ಪ್ರಕರಣ : ಮಾನಸಿಕ ಅಸ್ವಸ್ಥ ಹೇಳಿಕೆಗೆ ಖಂಡನೆ

ಶಿವಮೊಗ್ಗ: ಇತ್ತೀಚೆಗೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಆರ್.ಎಸ್.ಎಸ್. ಕಾರ್ಯಕರ್ತ ಆದಿತ್ಯರಾವ್‌ರನ್ನು ಕೆಲವು ಬಿಜೆಪಿ ಮುಖಂಡರು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿರುವುದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ತೀವ್ರವಾಗಿ ಖಂಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೌರತ್ವದ ಹೆಸರಿನಲ್ಲಿ ಈ ದೇಶ ಹಾಗೂ ರಾಜ್ಯದೆಲ್ಲೆಡೆ ವಿರೋಧಿಸಿ ಹೋರಾಟ ನಡೆಯುತ್ತಿವೆ. ಹೋರಾಟವನ್ನು ಹತ್ತಿಕ್ಕುವಲ್ಲಿ ರಾಜ್ಯ ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಒಂದು ಧರ್ಮವನ್ನು ಸಂಪೂರ್ಣವಾಗಿ ನಾಶಮಾಡಲು ಬಿಜೆಪಿಯ ಕೆಲವು ಸಚಿವರು ಹಾಗೂ ಶಾಸಕರು, ಆರ್.ಎಸ್.ಎಸ್.ನ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಇನ್ನಿತರರು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು, ತಮ್ಮ ಪಕ್ಷದ ಕಾರ್ಯಕರ್ತರನ್ನು ಸಮಾಜದಲ್ಲಿ ಕೋಮುಕೃತ್ಯ ಕೆಲಸಕ್ಕೆ ಕೈಹಾಕುವಂತೆ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇವರ ಹೇಳಿಕೆಯಿಂದ ಪ್ರಚೋದನೆಗೊಂಡು ಕೆಲವು ಹಿಂಬಾಲಕರು ಮತ್ತು ಕಾರ್ಯಕರ್ತರು ಕೋಮುಕೃತ್ಯ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ಇದುವರೆಗೂ ಬಿಜೆಪಿ ಮುಖಂಡರು ಇವರನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡು ಈಗ ಅವರ ಪೊಲೀಸರ ಕೈಗೆ ಸಿಕ್ಕ ತಕ್ಷಣ ಅವರು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಆದಿತ್ಯರಾವ್ ಸಿಕ್ಕು ಇನ್ನೂ ಪೊಲೀಸರು ವಿಚಾರಣೆ ಮಾಡುವ ಮುನ್ನವೇ ಆತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ಕೊಟ್ಟಿರುವುದನ್ನು ನೋಡಿದರೆ ಗೃಹಸಚಿವ, ಸಚಿವರು ಹಾಗೂ ಶಾಸಕರು ಯಾವಾಗ ನ್ಯೂರೋ ಸರ್ಜನ್ ಪದವಿ ಪಡೆದು, ವೈದ್ಯರಾದರು ಎಂದು ತಿಳಿಯುತ್ತಿಲ್ಲ ಎಂದು ಟೀಕಿಸಿದರು.
ವಿಮಾನ ನಿಲ್ದಾಣ ಪ್ರಕರಣದ ಆರೋಪಿ ಏನಾದರೂ ಅಲ್ಪಸಂಖ್ಯಾತರು ಅಥವಾ ಕಾಂಗ್ರೆಸ್ ಮುಖಂಡರು ವಾಸಮಾಡುವ ಸ್ಥಳದ ಬಳಿ ಬಾಂಬಿಟ್ಟು ಸಿಕ್ಕಿಕೊಂಡಿದ್ದರೆ ಮುಂದಿನ ದಿನಗಳಲ್ಲಿ ಆತನು ಮಹತ್ಮಾಗಾಂಧಿ ಕೊಂದಂತಹ ನಾಥೂರಾಮ್ ಗೋಡ್ಸೆ ಮಾದರಿಯಲ್ಲಿ ಹುತಾತ್ಮನಾಗಿ ಪಕ್ಷದ ಕಛೇರಿಗಳಲ್ಲಿ ಪೂಜಿಸಲ್ಪಡುತ್ತಿದ್ದ ಎಂದು ಲೇವಡಿ ಮಾಡಿದರು.
ಇನ್ನಾದರೂ ಆರ್.ಎಸ್.ಎಸ್. ಮುಖಂಡರು ತಮ್ಮ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರಿಗೆ ಇದೇ ರೀತಿ ಮನೆಹಾಳರ, ಸಮಾಜ ಘಾತುಕರ ಹೇಳಿಕೆಗೆ ಮನ್ನಣೆ ನೀಡದೇ ಸಮಾಜಸೇವೆಗೆ ನಿಲ್ಲಿರಿ ಎಂದು ಬುದ್ಧಿಹೇಳಲಿ. ಇಲ್ಲವಾದಲ್ಲಿ ಪಕ್ಷದ ಕೆಲಸದಿಂದ ದೂರ ಉಳಿಯಲಿ ಎಂದು ಸಲಹೆ ನೀಡಲಿ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕವಿತಾ ರಾಘವೇಂದ್ರ, ಜಫರುಲ್ಲಾ ಷರೀಫ್, ಸೈಮನ್ ರಾಜ್, ಸೈಯದ್ ಮುಜೀಬುಲ್ಲಾ, ಸರೀತಾ, ಅಣ್ಣಪ್ಪ, ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು.

Related posts

ನಂದಿತಾ ಸಾವಿನ ಪ್ರಕರಣ ಸಿಬಿಐಗೆ ವಹಿಸಿ

ಮೆಗ್ಗಾನ್ ಆಸ್ಪತ್ರೆ ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನ: ಸಚಿವ ಕೆ.ಎಸ್.ಈಶ್ವರಪ್ಪ

Times fo Deenabandhu

ಕೊರೊನಾ ವೈರಾಣು ಕ್ರಮೇಣ ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತ ನಡೆದಿದೆ ಜಾಗೃತೆ ವಹಿಸಲು ಜನತೆಗೆ ಡಾ. ಶಿವಮೂರ್ತಿ ಮುರುಘಾ ಶರಣರ ಕರೆ…..