Times of Deenabandhu
  • Home
  • ಜಿಲ್ಲೆ
  • ಎಸ್.ಜಿ.ಎಂ.ಟೆಕ್ನಾಲಜೀಸ್ ಸಂಸ್ಥೆಯಿಂದ ಆವಿಷ್ಕಾರದ ಅಡಿಕೆ ಸುಲಿಯುವ ಯಂತ್ರ
ಜಿಲ್ಲೆ

ಎಸ್.ಜಿ.ಎಂ.ಟೆಕ್ನಾಲಜೀಸ್ ಸಂಸ್ಥೆಯಿಂದ ಆವಿಷ್ಕಾರದ ಅಡಿಕೆ ಸುಲಿಯುವ ಯಂತ್ರ

ಶಿವಮೊಗ್ಗ: ಎಸ್.ಜಿ.ಎಂ.ಟೆಕ್ನಾಲಜೀಸ್ ಸಂಸ್ಥೆಯು ದಶಮಾನೋತ್ಸವದ ಸಂದರ್ಭದಲ್ಲಿ ನೂತನ ಆವಿಷ್ಕಾರದ ಅಡಿಕೆ ಸುಲಿಯುವ ಯಂತ್ರವನ್ನು ಹೊರತರಲಿದೆ . ಇದರ ಬಿಡುಗಡೆ ಸಮಾರಂಭ ಜ.೨೬ರಂದು ಬೆಳಿಗ್ಗೆ ೯ ಗಂಟೆಗೆ ಸಾಗರ ರಸ್ತೆಯ ಬಿಎಸ್‌ಎಲ್‌ಎನ್ ಕಚೇರಿ ಹತ್ತಿರ ಇರುವ ಎಸ್.ಜಿ.ಎಂ.ಟೆಕ್ನಾಲಜೀಸ್ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಜಿ.ಆರ್. ಪ್ರಕಾಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ ೧೦ ವರ್ಷಗಳಿಂದ ಅಡಿಕೆ ಬೆಳೆಗಾರರಿಗಾಗಿ ಹೊಸ ಯಂತ್ರಗಳ ಬಿಡುಗಡೆ ಮಾಡುತ್ತಾ ಬಂದಿದೆ. ಹೊಸ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ತಾಂತ್ರಿಕ ಕೊರತೆಗಳನ್ನು ನೀಗಿಸಿ ಮತ್ತಷ್ಟು ಆಧುನಿಕ ಯಂತ್ರಗಳನ್ನು ಪೇಟೆಂಟ್ ಹೊಂದಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಸಾವಿರಾರು ರೈತರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.

ಈಗ ಗೇರ್ ಅಳವಡಿಸಿದ ಹಸಿ ಮತ್ತು ಚಾಲಿ ಅಡಿಕೆ ಸುಲಿಯುವ ಯಂತ್ರದಲ್ಲಿ ಹೊಸ ಆವಿಷ್ಕಾರದ ‘ಅರೆಕಾ ಮಿಲ್’ ಯಂತ್ರ ಮತ್ತು ಅಡಿಕೆ ತೊಟ್ಟು ಸುಲಿಯುವ ಯಂತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಹಿಂದಿನ ಯಂತ್ರಗಳಿಗಿಂತ ಇದು ವಿಭಿನ್ನವಾಗಿದ್ದು, ನಮ್ಮ ೧೦ ವರ್ಷಗಳ ಅನುಭವವನ್ನು ಇದರೊಂದಿಗೆ ಹಂಚಿಕೊಂಡಿದ್ದೇವೆ. ೧-೨ ಎಕರೆ ತೋಟ ಇರುವ ಸಣ್ಣ ರೈತರಿಂದ ಹಿಡಿದ ೨೦-೩೦ ಎಕರೆ ಇರುವ ದೊಡ್ಡ ರೈತರಿಗೂ ಅನುಕೂಲವಾಗುವಂತೆ ಯಂತ್ರಗಳ ವೈಶಿಷ್ಟ್ಯತೆಯನ್ನು ಬದಲಾಯಿಸಲಾಗಿದೆ. ೧ ಗಂಟೆಗೆ ಸುಮಾರು ೭೫೦ಕೆಜಿ ಯಿಂದ ಇನ್ನು ಹೆಚ್ಚಿಗೆ ಸುಲಿಯುವ ಆವಿಷ್ಕಾರದ ಯಂತ್ರ ಇದಾಗಿದೆ ಎಂದರು.

ಅಡಿಕೆ ಸುಲಿಯಲು ಈಗ ಕೂಲಿಗಾರರೇ ಸಿಗುತ್ತಿಲ್ಲ. ಅಡಿಕೆ ಬೆಳೆಗಾರರಿಗೆ ಇದೊಂದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸಾಂಪ್ರದಾಯಿಕ ಬೆಳೆಗಾರರು ಸೇರಿದಂತೆ ಬಯಲು ಸೀಮೆಯ ಅಡಿಕೆ ಬೆಳೆಗಾರರು ಕೂಡ ಯಾಂತ್ರಿಕತೆಗೆ ಬದಲಾಗುವುದು ಅನಿವಾರ್ಯವಾಗಿದೆ. ಸ್ಥಳದಿಂದ ಸ್ಥಳಕ್ಕೆ ಅಡಿಕೆ ಬೆಳೆಯಲ್ಲೂ ಕೂಡ ವಿಭಿನ್ನವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ತರಹದ ರೈತರಿಗೂ ಅನುಕೂಲವಾಗುವ ಹಾಗೆ ಈ ಅಡಿಕೆ ಸುಲಿಯುವ ಯಂತ್ರವನ್ನು ನಮ್ಮ ಸಂಸ್ಥೆ ಬಿಡುಗಡೆ ಮಾಡುತ್ತಿದೆ ಎಂದರು.

ನಮ್ಮ ಸಂಸ್ಥೆಯ ಯಂತ್ರಗಳ ಆವಿಷ್ಕಾರವನ್ನು ಗಮನಿಸಿದ ತೋಟಗಾರಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳು ನಮ್ಮೊಂದಿಗೆ ಸಹಕಾರ ನೀಡಿದ್ದಾರೆ ಮತ್ತು ಈ ಯಂತ್ರಗಳನ್ನು ಕೊಳ್ಳುವವರಿಗೆ ಸಬ್ಸಿಡಿ ಕೂಡ ಇದೆ. ಇದುವರೆಗೂ ನಮ್ಮ ಸಂಸ್ಥೆಯು ಸುಮಾರು ೨ ಸಾವಿರಕ್ಕೂ ಹೆಚ್ಚು ರೈತರಿಗೆ ಯಂತ್ರಗಳ ತಲುಪಿಸಿದೆ. ನಮ್ಮ ಸಂಸ್ಥೆಯಲ್ಲಿ ೧೦೦ ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಕಂಡ ನಾನು ಡಿಪ್ಲೊಮಾ ಪದವೀಧರನಾಗಿದ್ದರೂ ಉದ್ಯೋಗವನ್ನು ಹರಸಿ ಹೋಗದೆ ಯಂತ್ರಗಳ ಅವಿಷ್ಕಾರದತ್ತ ಸಾಗಿ ಬೇಸಿಕ್ ಯಂತ್ರದಿಂದ ಇಲ್ಲಿಯತನಕ ಸಾಕಷ್ಟು ಬದಲಾವಣೆಗಳನ್ನು ಮಾಡಿ ಈ ಅರೇಕಾ ಮಿಲ್ ಮೂಲಕ ಬೆಳೆಗಾರರಿಗೆ ಅರ್ಪಿಸುತ್ತಿದ್ದೇನೆ ಎಂದರು.

Related posts

ಸ್ಥಳೀಯರಿಂದ ಗವಿಗುಡ್ಡ ಪರಿಸರದ ಸ್ವಚ್ಚತೆ

Times fo Deenabandhu

ಪ್ರಿಯದರ್ಶಿನಿ ಆಂಗ್ಲ ಫ್ರೌಢ ಶಾಲೆಯಲ್ಲಿ ಮಕ್ಕಳಿಂದ ತಂದೆ-ತಾಯಿಗೆ ಪಾದಪೂಜೆ ಸಲ್ಲಿಸುವ ವಿಶೇಷ ಕಾರ್ಯಕ್ರಮ

Times fo Deenabandhu

ನೆಲವಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶೋಭಾ ಚಂದ್ರಶೇಖರ್

Times fo Deenabandhu