Times of Deenabandhu
  • Home
  • ಜಿಲ್ಲೆ
  • ಮಂಗನಕಾಯಿಲೆ ಹರಡದಂತೆ ಮುನ್ನೆಚರಿಕೆ ವಹಿಸಿ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್
ಚಿಕ್ಕಮಗಳೂರು ಜಿಲ್ಲೆ

ಮಂಗನಕಾಯಿಲೆ ಹರಡದಂತೆ ಮುನ್ನೆಚರಿಕೆ ವಹಿಸಿ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹರಡದಂತೆ ಮುನ್ನೆಚರಿಕೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ವಿಚಕ್ಷಣಾ ಘಟಕದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೂಚಿಸಿದರು.
ಅವರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಚಕ್ಷಣಾ ಘಟಕದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಯಾಸನೂರು ಕಾಡಿನ ಕಾಯಿಲೆಯು ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿ ಗ್ರಾಮದಲ್ಲಿ ಓರ್ವ ಮಹಿಳೆಯನ್ನು ಬಲಿಪಡೆದಿದೆ. ತರೀಕೆರೆ, ನರಸಿಂಹರಾಜಪುರ, ಕೊಪ್ಪ ಶೃಂಗೇರಿ ಭಾಗಗಳಲ್ಲಿ ಕಳೆದ ಬಾರಿ ಕಂಡುಬಂದಿತ್ತು. ಇದೀಗ ಜಿಲ್ಲೆಯಲ್ಲಿಯೂ ಮಂಗನ ಕಾಯಿಲೆಯ ಭೀತಿ ಎದುರಾಗಿದ್ದ್ದು ರೋಗ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಎಂದರು.
ಕಾಯಿಲೆಯ ಕುರಿತು ಆಶಾಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆರೋಗ್ಯ ಸಹಾಯಕರು ಹಾಗೂ ಪಶು ಸಂಗೋಪನೆ ಇಲಾಖೆ ಜೊತೆಯಾಗಿ ಕಾಯಿಲೆ ಹರಡದಂತೆ ಜನತೆಯಲ್ಲಿ ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ವಿಚಕ್ಷಣಾ ಘಟಕದ ಸರ್ವೇಕ್ಷಣಾಧಿಕಾರಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾ ಈ ವೈರಸ್ ಕಾಡಿನಲ್ಲಿರುವ ಕೆಲವು ಪ್ರಾಣಿಗಳಲ್ಲಿದ್ದು, ಇವುಗಳ ಮೈಮೇಲಿರುವ ಉಣ್ಣೆಗಳಿಂದ ಪ್ರವೇಶಿಸುತ್ತದೆ. ಸತ್ತ ಮಂಗಗಳ ಮೇಲಿನ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ವೈರಸ್ ಮೂಲಕ ಈ ಕಾಯಿಲೆ ಹರಡುತ್ತದೆ ಎಂದು ಹೇಳಿದರು.
ಮುಂಜಾಗ್ರತಾ ಕ್ರಮವಾಗಿ ಈ ಕಾಯಿಲೆಯ ಲಕ್ಷಣಗಳುಳ್ಳ ರೋಗಿಗಳು ತಕ್ಷಣವೇ ಆರೋಗ್ಯ ತಪಾಸಣೆಗೆ ಒಳಪಡಬೇಕು. ಸತ್ತ ಮಂಗಗಳು ಕಂಡೊಡನೆ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕು ಹಾಗೂ ಕಾಡಿಗೆ ಹೋಗಬೇಕಾದ ಸಂದರ್ಭದಲ್ಲಿ ಉಣ್ಣೆಗಳಿಂದ ರಕ್ಷಣೆ ಪಡೆಯಲು ಕಾಲಿಗೆ ಬೂಟು ಹಾಗೂ ಮೈ ಪೂರ್ತಿ ಮುಚ್ಚುವಂತೆ ಬಟ್ಟೆಗಳನ್ನು ಧರಿಸಬೇಕು. ಕಾಡಿನಿಂದ ಬಂದ ಕೂಡಲೇ ಸೋಪು ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಸಾಮಾನ್ಯವಾಗಿ ಮಂಗಗಳು ಸಾಯುವುದು ಕಾಯಿಲೆಯ ಮುನ್ಸೂಚನೆಯಾಗಿದ್ದು, ಎಚ್ಚರಿಕೆ ಕ್ರಮ ವಹಿಸುವುದು ಸೂಕ್ತ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ಅರಣ್ಯ ವಿಭಾಗದ ಅಂಚಿನ ಹಳ್ಳಿಗಳಲ್ಲಿನ ೨೯,೨೨೫ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ೧೬,೦೦೩ ಜನರಿಗೆ ಲಸಿಕೆಯನ್ನು ಹಾಕಲಾಗಿದೆ ಎಂದರು. ಎಲ್ಲಾ ಜ್ವರದ ಪ್ರಕರಣಗಳು ಕೆಎಫ್‌ಡಿ ಎಂದು ಭಾವಿಸಬೇಕಾಗಿಲ್ಲ ಖಾಯಿಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ವೇಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಎಸ್.ಕೆ ಪ್ರಭು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಅಕ್ಕಮಹಾದೇವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಪಂಚಾಯತ್‌ರಾಜ್ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯ : ಕೆ.ಸಿ.ಶಾಂತಾಕುಮಾರಿ

Times fo Deenabandhu

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

Times fo Deenabandhu

ಕೋವಿಡ್-19 ತಡೆಗಟ್ಟಲು ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ-ಡಾ. ಶಾಲಿನಿ ರಜನೀಶ್