September 28, 2020
Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಆಗಸದಲ್ಲಿ ಕಂಡ ಆ ಉಂಗುರದಂತಹ ಆಕಾರ ಏನು..?

ಅದು ನೀಲಾಗಸದಲ್ಲಿ ಕಂಡ ವೃತ್ತಾಕಾರ. ಕಪ್ಪು ಉಂಗುರದ ರೀತಿ ಕಂಡ ಈ ಆಕಾರ ಈಗ ಎಲ್ಲರ ಕುತೂಹಲ ಕೆರಳಿಸಿದೆ. ಇದು ಲಾಹೋರ್‌ನಲ್ಲಿ ಸೆರೆಯಾದ ದೃಶ್ಯ ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿಯಾಗಿಯೇ ಹರಿದಾಡುತ್ತಿದೆ.
ನಿಜವಾಗಿಯೂ ಈ ಉಂಗುರದಂತಹ ಆಕಾರ ಏನು ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. ಹೀಗಾಗಿ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿಯೇ ಚರ್ಚೆ ನಡೆಯುತ್ತಿದೆ. ಕೆಲವರು ಇದು ಏಲಿಯನ್ಸ್‌ಗಳ ಚಮತ್ಕಾರ ಎಂದರೆ, ಇನ್ನು ಕೆಲವರು ಇದು ಕೆಟ್ಟ ಶಕುನ ಎಂದಿದ್ದಾರೆ.
ಇನ್ನು, ಕೆಲವರು ಹಾಸ್ಯದ ದಾಟಿಯಲ್ಲಿ ಕಮೆಂಟ್ ಮಾಡಿದರೆ, ಇನ್ನೊಂದಷ್ಟು ಜನ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಜನ ಮಾಡುವ ಮಾಲಿನ್ಯದ ಪರಿಣಾಮ ಎಂಬರ್ಥದಲ್ಲಿ ಒಬ್ಬರು ಟ್ವೀಟ್ ಮಾಡಿದ್ದಾರೆ.
ಈ ಉಂಗುರದಾಕೃತಿ ಶೂಟ್ ಮಾಡಿದ ಜಾಗದಲ್ಲೇ ಪಾಕಿಸ್ತಾನದ `ಮೇರೆ ಪಾಸ್ ತುಮ್ ಹೋ’ ಧಾರಾವಾಹಿಯ ಹೋರ್ಡಿಂಗ್ ಕೂಡಾ ಇತ್ತು. ಹೀಗಾಗಿ, ಕೆಲವರು ಈ ಧಾರಾವಾಹಿಯನ್ನು ಕಿಚಾಯಿಸಿದ್ದಾರೆ. ಏಲಿಯನ್ಸ್‌ ಈ ಧಾರಾವಾಹಿಯನ್ನು ನೋಡಲು ಇಲ್ಲಿಗೆ ಬಂದಿವೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಈ ಚರ್ಚೆಯ ನಡುವೆ, ದುಬೈನಲ್ಲೂ ಕೆಲದಿನಗಳ ಹಿಂದೆ ಇಂತಹದ್ದೇ ದೃಶ್ಯವನ್ನು ನಾನು ನೋಡಿದ್ದೇನೆ ಎಂದು ಒಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಆದರೆ, ಈ ಕಪ್ಪು ವೃತ್ತಕ್ಕೆ ಕಾರಣ ಏನು ಎಂದು ಗೊತ್ತಾಗಿಲ್ಲ. 2015ರಲ್ಲಿ ಇದೇ ರೀತಿಯ ಒ-ಆಕಾರದ ಕಪ್ಪು ಹೊಗೆಯ ಉಂಗುರ ಉತ್ತರ ಖಜಕೀಸ್ಥಾನದಲ್ಲಿ ಕಾಣಿಸಿಕೊಂಡಿತ್ತಂತೆ. 15 ನಿಮಿಷಗಳ ಕಾಲ ಗೋಚರಿಸಿದ ಈ ಆಕಾರ ಬಳಿಕ ಮರೆಯಾಗಿತ್ತು ಎಂದು ಹೇಳಲಾಗುತ್ತಿದೆ. ಜೊತೆಗೆ, 2013 ಫ್ಲೋರಿಡಾದಲ್ಲೂ ಇದೇ ರೀತಿಯ ದೃಶ್ಯ ಸೆರೆಯಾಗಿತ್ತು. ಬಳಿಕ ಇದು ಪಟಾಕಿ ಪ್ರದರ್ಶನದ ಪರೀಕ್ಷೆಯಿಂದ ಉಂಟಾದ ರಿಂಗ್ ಎಂದು ಗೊತ್ತಾಗಿತ್ತು. 2012ರಲ್ಲಿ ಚಿಕಾಗೋದಲ್ಲೂ ಇದೇ ರೀತಿ ಆಕಾರ ಕಾಣಿಸಿಕೊಂಡಿತ್ತು. ನಂತರ ನಡೆದ ಪರಿಶೀಲನೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಫೋಟವೇ ಇದಕ್ಕೆ ಕಾರಣ ಎಂದು ಗೊತ್ತಾಗಿತ್ತು.

 

 

 

 

Related posts

ಭೂಗ್ರಹದ ಸಮೀಪ ಹಾದು ಹೋಗಲಿರುವ ಬೃಹತ್ ಕ್ಷುದ್ರಗ್ರಹ; ಭೂಮಿಗೆ ಕಾದಿದೆಯೇ ಗಂಡಾಂತರ?

Times fo Deenabandhu

‘ಸುಪಾರಿ ಕೊಟ್ಟು ಕೊಲೆಗೆ ಸಂಚು’: ರೇವಣ್ಣ ಪುತ್ರನ ವಿರುದ್ಧ ದೇವರಾಜೇಗೌಡ ಆರೋಪ

Times fo Deenabandhu

 ಜಿಡಿಪಿ ಶೇ 1.1ಕ್ಕೆ ಕುಸಿತ ಸಂಭವ

Times fo Deenabandhu