Times of Deenabandhu
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಇನ್ಮುಂದೆ ಮಲಗೋದಿಲ್ಲ ಮುಂಬೈ..!

ಮುಂಬಯಿ: ದೇಶದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಜನವರಿ 27ರಿಂದ ಮಾಲ್‌ಗಳು, ರೆಸ್ಟೋರೆಂಟ್‌, ಮಲ್ಟಿಫ್ಲೆಕ್ಸ್‌ಗಳು ಹಾಗೂ ಇತರ ಮಳಿಗೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದಕ್ಕೆ ಅವಕಾಶ ನೀಡುವ ಪ್ರಸ್ತಾವನೆಗೆ ಸಿಎಂ ಉದ್ಧವ್‌ ಠಾಕ್ರೆ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಈ ಮೂಲಕ ಮಹಾನಗರಿಯ ‘ನೈಟ್‌ ಲೈಫ್‌’ ಇನ್ನಷ್ಟು ಖದರು ಪಡೆಯಲಿದೆ. ಇದರ ಬೆನ್ನಲ್ಲೇ ಪ್ರಮುಖ ಪ್ರತಿಪಕ್ಷ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದೆ.
‘ಲಂಡನ್‌ನಂತೆ ಮುಂಬಯಿ ಸಹ ಅಂತಾರಾಷ್ಟ್ರೀಯ ನಗರವಾಗಿರುವುದರಿಂದ ಇಲ್ಲಿನ ವ್ಯಾಪಾರ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ಪ್ರಾರಂಭದಲ್ಲಿ ಜನವರಿ 27ರಿಂದ ವಸತಿ ಪ್ರದೇಶಗಳನ್ನು ಹೊರತುಪಡಿಸಿ ವಾಣಿಜ್ಯ ವಹಿವಾಟು ಹೆಚ್ಚಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಮತ್ತು ನಾರಿಮನ್‌ ಪಾಯಿಂಟ್‌ ಭಾಗದ ಶಾಪಿಂಗ್‌ ಮಾಲ್‌, ಮಲ್ಟಿಫ್ಲೆಕ್ಸ್‌, ರೆಸ್ಟೋರೆಂಟ್‌ ಹಾಗೂ ಇತರ ಮಳಿಗೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹೇಳಿದರು.
ಲಂಡನ್‌ನಲ್ಲಿ ರಾತ್ರಿ ಹೊತ್ತಿನ ವಾಣಿಜ್ಯ ವಹಿವಾಟು ಮೌಲ್ಯ ಸರಿಸುಮಾರು 5 ಶತಕೋಟಿ ಪೌಂಡ್‌ ಆಗಿದೆ. ಅದೇ ರೀತಿ ಮುಂಬಯಿನಲ್ಲೂ ‘ನೈಟ್‌ ಲೈಫ್‌’ ವಹಿವಾಟು ಜೋರಾಗಿ ರಾಜ್ಯದ ಬೊಕ್ಕಸಕ್ಕೆ ಆದಾಯ ಬರಲಿದೆ. ದಿನಪೂರ್ತಿ ಮಾಲ್‌, ರೆಸ್ಟೋರೆಂಟ್‌ಗಳ ಕಾರ್ಯಾಚರಣೆಯಿಂದ ಸೇವಾ ವಲಯದಲ್ಲಿ ಜನರಿಗೆ ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದು ಶಿವಸೇನೆ ಸರಕಾರದ ನಡೆಯನ್ನು ಸಮರ್ಥಿಸಿಕೊಂಡಿದೆ.
ಪಬ್‌ ಮತ್ತು ಬಾರ್‌ಗಳ ವ್ಯವಹಾರ ಸಮಯದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಮುಂಬೈ ನಗರದಲ್ಲಿ ಪಬ್‌ ಮತ್ತು ಬಾರ್‌ಗಳಿಗೆ ಮಧ್ಯರಾತ್ರಿ 1.30ರವರೆಗೆ ತೆರೆದಿರಲು ಈಗಾಗಲೇ ಅನುಮತಿ ಇದ್ದು, ಇದರಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದರಿಂದ ನಗರ ಪೊಲೀಸರ ಮೇಲೆ ಅಧಿಕ ಕಾರ್ಯದೊತ್ತಡ ಉಂಟಾಗುವುದಿಲ್ಲ ಎಂದೂ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಮುಂಬಯಿನಲ್ಲಿ ದಿನದ 24 ಗಂಟೆಯೂ ವಾಣಿಜ್ಯ ವಹಿವಾಟು ಕೇಂದ್ರಗಳು ತೆರೆಯಲು ಅನುಮತಿ ನೀಡಿರುವುದರು ಸರಿಯಲ್ಲ. ಇದರಿಂದ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುವ ಅಪಾಯವಿದೆ. ಹೀಗಾಗಿ ಸರಕಾರ ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಬಿಜೆಪಿ ಶಾಸಕ ಆಶೀಶ್‌ ಶೇಲಾರ್‌ ಆಗ್ರಹಿಸಿದ್ದಾರೆ.

Related posts

ತಿರುಪತಿ ದರ್ಶನ: ನಕಲಿ ವೆಬ್‌ಸೈಟ್‌ಗಳ ವಿರುದ್ಧ ದೂರು, ಅಸಲಿ ವೆಬ್ ಸೈಟ್ ಗಳ ವಿವರ

Times fo Deenabandhu

ಜಿಎಸ್‌ಟಿ ಪಾವತಿಸಿಲ್ಲವೇ? ಅಧಿಕಾರಿಗಳು ಬ್ಯಾಂಕ್‌ ಖಾತೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು

Times fo Deenabandhu

ಲಾಕ್‌ಡೌನ್‌ ವಿಸ್ತರಣೆ ಇಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ