Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಓಮಾನ್ ದೊರೆಯ ನಿಧನ: ಭಾರತದಲ್ಲಿ ಸೋಮವಾರ ಶೋಕಾಚರಣೆ

ಹೊಸದೆಹಲಿ: ಓಮಾನ್‌ ದೊರೆ ಖಬೂಸ್‌ ಬಿನ್ ಸೈದ್ ಅಲ್ ಸೈದ್ ನಿಧನರಾಗಿದ್ದು ಅವರ ಗೌರವಾರ್ಥವಾಗಿ ಭಾರತದಲ್ಲಿ ಒಂದು ದಿನದ ಶೋಕಾಚರಣೆಗೆ ಕೇಂದ್ರ ಸರಕಾರ ನಿರ್ಧಾರ ಮಾಡಿದೆ. ಈ ಕುರಿತಾಗಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು ಸೋಮವಾರದಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ನಡೆಯಲಿದೆ.
ಜನವರಿ 10 ರಂದು ಓಮಾನ್‌ ದೊರೆ ಖಬೂಸ್‌ ಬಿನ್ ಸೈದ್ ನಿಧನ ಹೊಂದಿದ್ದಾರೆ. ಮೃತರ ಅಂತ್ಯಸಂಸ್ಕಾರ ಭಾನುವಾರ ಓಮಾನ್‌ ದೇಶದಲ್ಲಿ ನಡೆಯಿತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಓಮಾನ್ ದೊರೆ ತಮ್ಮ 79 ವರ್ಷದಲ್ಲಿ ಮೃತಪಟ್ಟಿದ್ದಾರೆ. ಸುಮಾರು 50 ವರ್ಷಗಳ ಸುದೀರ್ಘ ಆಡಳಿತ ನಡೆಸಿದ ಖಬೂಸ್‌ ಬಿನ್ ಸೈದ್ ಅವರು ಭಾರತದ ಜೊತೆಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಖಬೂಸ್ ಬಿನ್ ಸೈದ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಪ್ರಮುಖ ಗಣ್ಯರು ಸಂತಾಪ ಸೂಚಿಸಿದ್ದಾರೆ. ಓಮಾನ್ ದೊರೆ ಅತ್ಯಂತ ಉದಾರವಾದಿ ಆಡಳಿತಗಾರ ಎಂದೇ ಪ್ರಸಿದ್ದರಾಗಿದ್ದರು. ಇಸ್ಲಾಂ ದೇಶವಾದ ಓಮಾನ್‌ನಲ್ಲಿ ಹಲವು ದೇವಾಲಯಗಳನ್ನು ನಿರ್ಮಾಣ ಮಾಡಿದ್ದರು.
ಇವರಿಗೆ ಈ ಹಿಂದೆ ಅನಾರೋಗ್ಯ ಕಾಣಿಸಿಕೊಂಡಾಗ ದಕ್ಷಿಣ ಕನ್ನಡ ಜಿಲ್ಲೆಯ ದೇವಾಸ್ಥಾನದಲ್ಲೂ ಪೂಜೆ ಪುರಸ್ಕಾರವನ್ನು ನಡೆಸಲಾಗಿತ್ತು. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಇವರ ನಿಧನದ ಹಿನ್ನೆಲೆಯಲ್ಲಿ ಸೋಮವಾರದಂದು ದೇಶಾದ್ಯಂತ ಶೋಕಾಚರಣೆ ನಡೆಯಲಿದ್ದು ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವ ಮೂಲಕ ಗೌರವ ಸಲ್ಲಿಸುವಂತೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ.

Related posts

 76 ಭಾರತೀಯ ಯೋಧರಿಗೆ ಗಾಯ, ಸೈನಿಕರ ಆರೋಗ್ಯದಲ್ಲಿ ಚೇತರಿಕೆ

ರಂಗಭೂಮಿಯಿಂದ ಉದಯಿಸಿದ ಅಭಿಜಾತ ಪ್ರತಿಭೆ ಶಾಂತಮ್ಮ

 ವಂಚನೆ ತಡೆಯಲು ಆರ್‌ಬಿಐ ಸೂಚನೆ

Times fo Deenabandhu