Times of Deenabandhu
  • Home
  • ಜಿಲ್ಲೆ
  • ಜ.೧೨ರಿಂದ ೧೪ರ ವರೆಗೆ ಆದಿವಾಸಿ ಸಾಂಸ್ಕೃತಿಕ ಸಮಾವೇಶ
ಚಿಕ್ಕಮಗಳೂರು ಜಿಲ್ಲೆ

ಜ.೧೨ರಿಂದ ೧೪ರ ವರೆಗೆ ಆದಿವಾಸಿ ಸಾಂಸ್ಕೃತಿಕ ಸಮಾವೇಶ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣ ಪರಿಷತ್, ಕಲ್ಯಾಣ ಕರ್ನಾಟಕ ಗೋಂಡ ಸಂಘ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಜ.೧೨ರಿಂದ ೧೪ರ ವರೆಗೆ ರಾಯಚೂರು ಜಿಲ್ಲೆ ದೇವದುರ್ಗಾದ ಕನಕಗುರುಪೀಠದಲ್ಲಿ ಆದಿವಾಸಿ ಸಾಂಸ್ಕೃತಿಕ ಸಮಾವೇಶವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆದಿವಾಸಿ ರಕ್ಷಣ ಪರಿಷತ್‌ನ ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀನಿವಾಸ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಮುತ್ತಪ್ಪ, ಜಿಲ್ಲಾಧ್ಯಕ್ಷ ಪಿ.ರಾಜೇಶ್ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಎಲ್ಲಾ ಮೂಲ ಬುಡಕಟ್ಟುಗಳ ಜನರ ಹಕ್ಕುಗಳ ಸಂರಕ್ಷಣೆಗಾಗಿ ೨೦೧೧ರಲ್ಲಿ ಜನ್ಮತಾಳಿದ ಕರ್ನಾಟಕ ಆದಿವಾಸಿ ಪರಿಷತ್ ಆದಿವಾಸಿಗಳ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಅಭಿವೃದ್ಧಿ ಮತ್ತು ಆದಿಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪರಿಷತ್ ನಿರಂತರವಾಗಿ ಆದಿವಾಸಿಗಳ ಹಕ್ಕೋತ್ತಾಯಗಳನ್ನು ಮಂಡಿಸುತ್ತಲೇ ಬಂದಿದೆ. ಸರ್ಕಾರಗಳು ಹತ್ತಾರು ಬೇಡಿಕೆಗಳನ್ನು ಈಡೇರಿಸಿದ್ದರೂ ಆದಿವಾಸಿಗಳ ಸಮಸ್ಯೆಗಳು ಇನಷ್ಟು ಜಟಿಲವಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಗಳ ಗಮನ ಸೆಳೆಯಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಈ ಸಮಾವೇಶಕ್ಕೆ ರಾಯಚೂರು ಜಿಲ್ಲೆ ದೇವದುರ್ಗಾ ತಾಲೂಕಿನ ಶ್ರೀ ಕನಕ ಗುರುಪೀಠದ ಶ್ರೀ ಸಿದ್ಧರಾಮನಂದ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಭಾರತ ಸರ್ಕಾರದ ಬುಡಕಟ್ಟು ವ್ಯವಾಹಾರಗಳ ಸಂಪುಟ ಸಚಿವರಾದ ಅರ್ಜುನ್ ಮುಂಡ, ರಾಜ್ಯ ಸಚಿವೆ ರೇಣುಕಾ ಸಿಂಗ್ ಸರೋಟ, ರಾಜ್ಯ ಉಕ್ಕು ಸಚಿವ ಫಗನ್ ಸಿಂಗ್ ಖುಲಾಸ್ತೆ, ರಾಜ್ಯಸಭಾ ಸದಸ್ಯೆ ಸಂಪತೀಯ ಉಯ್ಕೆ, ಬಸವ ಕಲ್ಯಾಣದ ಶಾಸಕ ನಾರಾಯಣ ರಾವ್, ಮಾಜಿ ಶಾಸಕ ಅಡಗೂರು ವಿಶ್ವನಾಥ್ ಸೇರಿದಂತೆ ರಾಜಕೀಯ ಧುರೀಣರು ಮತ್ತು ಬುಡಕಟ್ಟು ಚಿಂತಕರು, ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಈ ಸಮಾವೇಶದಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಚಿವರುಗಳ ಮುಂದೆ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಮುಂಡಿಸಲಾಗುವುದು.
೧. ಕರ್ನಾಟಕ ಪರಿಶಿಷ್ಟ ಪಂಗಡ, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಬುಡಕಟ್ಟುಗಳ ಪಟ್ಟಿಯನ್ನು ಪರಿಷ್ಕರಿಸುವುದು.
೨.ಕರ್ನಾಟಕ ಪರಿಶಿಷ್ಟ ಪಂಗಡ, ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಅತೀಸೂಕ್ಷ್ಮ ಬುಡಕಟ್ಟುಗಳ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಮತ್ತು ಸ್ವತಂತ್ರ ಅಭಿವೃದ್ಧಿ ನಿಗಮ ರಚಿಸಿ ಜಿಲ್ಲಾವಾರು ಮತ್ತು ಬುಡಕಟ್ಟುವಾರು ಕಾರ್ಯಕ್ರಮಗಳ್ನು ರೂಪಿಸಿ ಅನುಷ್ಠಾನ ಗೊಳಿಸುವುದು.
೩.ಕರ್ನಾಟಕ ರಾಜ್ಯದ ವಿಜಯಪುರ, ಬಾಗಲಕೋಟೆ, ಗದಗ ಮತ್ತು ಹುಬ್ಬಳ್ಳಿ ಸೇಟ್ಲಮೆಂಟ್‌ಗಳಲ್ಲಿಯ ವಿಮುಕ್ತ ಬುಡಕಟ್ಟುಗಳ ಮಕ್ಕಳ ವಿದ್ಯಾರ್ಜನೆಗಾಗಿ ನವೋದಯ ಮಾದರಿಯಲ್ಲಿ ಆಶ್ರಮ ಶಾಲೆಗಳನ್ನು ಆರಂಭಿಸುವುದು.
೪.ಮೂಲ ಆದಿವಾಸಿ ಪ್ರದೇಶಗಳಲ್ಲಿರುವ ಆಶ್ರಮ ಶಾಲೆಗಳನ್ನು ಮೂರಾರ್ಜಿ ದೇಸಾಯಿ, ಏಕಲವ್ಯ, ಕಿತ್ತೂರು ರಾಣಿ ಚನ್ನಮ್ಮ, ವಾಜಪೇಯಿ ಆಶ್ರಮ ಶಾಲೆಗಳಂತೆ ಪದವಿ ಪೂರ್ವ ಶಿಕ್ಷಣದ ವರೆಗೂ ಉನ್ನತಿಕರಣಗೊಳಿಸಿ , ಮೂಲ ಆದಿವಾಸಿ ವರ್ಗದ ಎಂ.ಎ., ಬಿ.ಇಡಿ., ಡಿ.ಇ.ಡಿ. ಪದವೀಧರರನ್ನೂ ಶಿಕ್ಷಕರಾಗಿ ನೇರ ನೇಮಕಾತಿ ಮಾಡುವುದು.
೫. ಆದಿವಾಸಿ ಅರಣ್ಯ ಹಕ್ಕುಕಾಯ್ದೆ ಮತ್ತು ಪೈಸಾರಿ, ಗೋಮಾಳ, ಗಾಯರಾಣ ಇತ್ಯಾದಿ ಕಂದಾಯ ಜಮೀನಲ್ಲಿರುವ ಆದಿವಾಸಿ ಫಲಾನುಭವಿಗಳಿಗೆ ಕಾಲ ಮಿತಿಯಲ್ಲಿ ಪಟ್ಟ ನೀಡುವುದು.
೬. ಕರ್ನಾಟಕ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಲೈನ್ ಮನೆಗಳಲ್ಲಿರುವ ಜೀತದ ಆದಿವಾಸಿಗಳ ಸಮೀಕ್ಷೆ ನಡೆಸಿ ಸಮಗ್ರವಾಗಿ ಪುರ್ನವಸತಿ ಕಲ್ಪಿಸುವುದು
೭.ಸೂಕ್ಷ್ಮ ಬಡಕಟ್ಟುಗಳಿಗಾಗಿ ಜಿಲ್ಲಾಮಟ್ಟದಲ್ಲಿ ಆದಿವಾಸಿ ಭವನಗಳನ್ನು ನಿರ್ಮಿಸಿ, ಅವರ ಜಾನಪದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು.
೮.ಕರ್ನಾಟಕ ರಾಜ್ಯ ಮೂಲಬುಡಕಟ್ಟುಗಳ ಅರಣ್ಯ ಹಕ್ಕುಗಳನ್ನು ಸಂರಕ್ಷಿಸಲು ಪಶ್ಚಿಮ ಘಟ್ಟ ಪ್ರದೇಶವನ್ನು ಸಂವಿಧಾನದ ಆರನೇ ಅನುಸೂಚಿಯಲ್ಲಿ ಸೇರಿಸಲು ಭಾರತ ಸರ್ಕಾರಕ್ಕೆ ಸೇರಿಸಲು ಶಿಫಾರಸ್ಸು ಮಾಡುವುದು.
೯.ಕರ್ನಾಟಕ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗೊಂಡಿರುವ
ಗೋಂಡ ಬುಡಕಟ್ಟಿನ ಪರ್ಯಾಯ ಪದವಾಗಿ ಕುರುಬ ಪದವನ್ನು ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಪರಿಗಣಿಸುವುದು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಣಿಯನ್ ಬುಡಕಟ್ಟಿನ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಬುಡಕಟ್ಟಿನ ಪ್ರಾದೇಶಿಕ ಮಿತಿಯನ್ನು ಸಡಲಿಸುವುದು.
೧೦.ಬೆಟ್ಟ ಕುರುಬ, ಹಾಲಕ್ಕಿ ಒಕ್ಕಲಿಗ, ಕಾಡುಗೊಲ್ಲ, ಗಂಗಾಮತ, ಕುಣುಬಿ, ಪರಿವಾರ, ತಳವಾರ ಇತ್ಯಾದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಮತ್ತೋಮ್ಮೆ ಭಾರತ ಸರ್ಕಾರದ ಸಂಬಂಧಪಟ್ಟ ಮಂತ್ರಾಲಯಕ್ಕೆ ರಾಜ್ಯ ಸರ್ಕಾರ ಸಮಾಲೋಚಿಸಿ ಪತ್ರಿಕಾ ವ್ಯವಹಾರ ನಡೆಸುವುದು.
೧೧.ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದ ಮನೆ, ಜಮೀನು ಮತ್ತು ಬದುಕನ್ನು ಕಳೆದುಕೊಂಡಿರುವ ಬುಡಕಟ್ಟು ಆದಿವಾಸಿ ಕುಟುಂಬಗಳಿಗೆ ಪ್ರತ್ಯೇಕವಾಗಿ ತುರ್ತಾಗಿ ಪುರ್ನವಸತಿ ಕಲ್ಪಿಸುವುದು.
೧೨.ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆದಿವಾಸಿ ಗಿರಿಜನ ಕಲ್ಯಾಣ ಕೇಂದ್ರಗಳ ಹೆಸರುಗಳಲ್ಲಿ ಶಿಕ್ಷಣ ಕೇಂದ್ರ, ಆರ್ಯವೇದ ಚಿಕಿತ್ಸಾಕೇಂದ್ರ ಮುಂತಾದ ಹೆಸರಿನಲ್ಲಿ ಭೂ ಪರಿವರ್ತನೆಗೊಳಿಸಿಕೊಂಡು ವ್ಯವಹಾರ ನಡೆಸುತ್ತಿರುವ ಎನ್.ಜಿ.ಓ ಸಂಸ್ಥೆಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿ ಗಿರಿಜನ ಅಭಿವೃದ್ಧಿ ಇಲಾಖೆಗಳಿಂದ ದೂರ ಇಡುವಂತೆ ಹಕ್ಕೊತ್ತಾಯಗಳನ್ನು ಮುಂಡಿಸಲಾಗುವುದು ಎಂದಿದ್ದಾರೆ.

Related posts

‘ಆಳ್ವಾಸ್ ನ್ಯೂಟ್ರಿಷನ್ ಸೆಂಟರ್’ನ ಉದ್ಘಾಟನೆ:‘ಮೈಂಡ್ ಫುಲ್ನೆಲಸ್’ ಕಾರ್ಯಗಾರ: “ಬೆಸ್ಟ್ ವುಮೆನ್ ಫಾಕಲ್ಟಿ”

Times fo Deenabandhu

ಕೆರೆ ಹೂಳು ತೆಗೆಯುವ ವಿಚಾರ : ಜಿ.ಪಂ ಸದಸ್ಯ ಮಣಿಶೇಖರ್ ಮೇಲೆ ಹಲ್ಲೆ

Times fo Deenabandhu

ಒಂದು ವರ್ಷ ಪೂರೈಸಿದ ಮೇಯರ್ ಎಸ್.ಎನ್.ಚನ್ನಬಸಪ್ಪರ ಮನದ ಮಾತು..

Times fo Deenabandhu