Times of Deenabandhu
  • Home
  • ಪ್ರಧಾನ ಸುದ್ದಿ
  • ನಾನೆಂದೂ ದ್ವೇಷ ರಾಜಕಾರಣ ಮಾಡಿಲ್ಲ, ತೊಂದರೆಯಾಗಿದ್ದರೆ ಕ್ಷಮಿಸಿ : ಎಸ್.ಎಂ ಕೃಷ್ಣ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ನಾನೆಂದೂ ದ್ವೇಷ ರಾಜಕಾರಣ ಮಾಡಿಲ್ಲ, ತೊಂದರೆಯಾಗಿದ್ದರೆ ಕ್ಷಮಿಸಿ : ಎಸ್.ಎಂ ಕೃಷ್ಣ

ಬೆಂಗಳೂರು: ನಾನು ಯಾರನ್ನು ಎಂದೂ ದ್ವೇಷ ಮಾಡಲು ಪ್ರಯತ್ನಿಸಲಿಲ್ಲ. ಆದರೂ ಸಾರ್ವಜನಿಕ ಜೀವನದಲ್ಲಿ ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ. ಎಲ್ಲವನ್ನೂ ಮರೆತುಬಿಡಿ. ಪರಸ್ಪರ ನಿಂದನೆಯನ್ನು ಸದ್ಯಕ್ಕೆ ಹಿಂದೆ ಹಾಕಿ ಮುನ್ನಡೆಯೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಎಸ್.ಎಂ ಕೃಷ್ಣ ಮನವಿ ಮಾಡಿದ್ದಾರೆ.
ತಮ್ಮ ಸಾರ್ಥಕ ಸಂಸದೀಯ ನೆನಪುಗಳನ್ನು ಒಳಗೊಂಡ “ಕೃಷ್ಣಪಥ‌ ಸೇರಿ ಸಾಧನೆ-ಸಿದ್ದಿಗಳ ಪರಿಚಯ, ಆಕರ ಗ್ರಂಥಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗ ಪ್ರಜಾಪ್ರಭುತ್ವ ಹಣಬಲದ ಮೇಲೆ ನಿಂತಿದೆ. ಒಳ್ಳೆಯ ದಿನಗಳನ್ನು ನೋಡಿ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂತಹವರಿಗೆ ಇದು ಕಳವಳ‌ ಮೂಡಿಸುತ್ತಿದೆ. ಎಲ್ಲಿಯವರಗೆ ಹಣದ ಪ್ರಭಾವ ಇರುತ್ತದೊ ಅಲ್ಲಿಯವರಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಈ ಬಗ್ಗೆ ಬಾಳ ಮುಸ್ಸಂಜೆಯಲ್ಲಿರುವವರಿಗಿಂತ ಹೊಸದಾಗಿ ರಾಜಕೀಯ ಪ್ರವೇಶ ಮಾಡುತ್ತಿರುವ ಯುವ ಸಮೂಹ ಚಿಂತನೆ ಮಾಡಬೇಕು ಎಂದರು.
ಮೊದಲೆಲ್ಲಾ ದೇವರೇ ಕಷ್ಟಗಳನ್ನೆಲ್ಲಾ ನನಗೊಬ್ಬನಿಗೆ ಏಕೆಕೊಟ್ಟೆ ಎಲ್ಲರಿಗೂ ಸ್ವಲ್ಪಸ್ವಲ್ಪ ಹಂಚು ಎಂದು ಕೇಳುತ್ತಿದ್ದೆ‌. ಆದರೆ ಕಷ್ಟಗಳು ಬಂದಿದ್ದು ,ಅದನ್ನು ನಾನು ಎದುರಿಸಿದ್ದು ಒಳ್ಳೆಯದೇ ಆಯಿತು ಎಂದು ಈಗ ಅನ್ನಿಸುತ್ತಿದೆ. ಸವಾಲುಗಳಿಂದಲೇ ನಾನು ಪರಿಪೂರ್ಣ ಮನುಷ್ಯನಾಗಲು ಸಾಧ್ಯವಾಯಿತು. ನನ್ನ ತಂದೆ ನನಗೆ ತುಂಬಿದ್ದ ಮೌಲ್ಯಗಳು ನನ್ನಲ್ಲಿ ಈಗಲೂ ಉಳಿದುಕೊಂಡಿದೆ. ಆದರೂ ಕಳೆದ ಮೂರು ದಶಕಗಳಲ್ಲಿ ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಹೊತ್ತೊಯ್ದಾಗ ನನ್ನಲ್ಲಿ ತಳಮಳ ಇದ್ದಿದ್ದು ನಿಜ.ಆದರೆ ಎದೆಗುಂದಲಿಲ್ಲ. ಧೈರ್ಯವಾಗಿ ಎದುರಿಸಿದೆ. ಸವಾಲುಗಳೇ ಮನುಷ್ಯನನ್ನು ನಾಯಕನನ್ನಾಗಿ ಮಾಡುತ್ತದೆ ಎಂಬುದು ಸತ್ಯ. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ತಮಿಳರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗುತ್ತದೋ ಎಂಬ ಭಯ ತಳಮಳ ನನ್ನಲ್ಲಿತ್ತು. ಆದರೆ ಮುನ್ನೆಚ್ಚರಿಕೆ ತೆಗೆದುಕೊಂಡ ಕಾರಣ ಧೈರ್ಯವಾಗಿ ಪರಿಸ್ಥಿತಿ ನಿಬಾಯಿಸಿದೆವು ಎಂದು ಹಳೆಯ ನೆನಪುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಕೃಷ್ಟಪಥ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮೈಸೂರು ರಾಮಕೃಷ್ಣ ಮಠದ ಮುಕ್ತಿದಾನಂದ ಮಹಾರಾಜ್, ರಾಜಕೀಯ ನಾಯಕನ ವಿಶೇಷ ವ್ಯಕ್ತಿತ್ವ, ಸೇವಾ ಕಂಕೈರ್ಯ, ಆಡಳಿತಾತ್ಮ ಸಾಮರ್ಥ್ಯಗಳನ್ನು ಜನಮನದ ಹೃನ್ಮನಗಳಿಗೆ ಇಳಿಸಲು ಮತ್ತು ಪರಿಚಯಿಸಲು ಆರು ಗ್ರಂಥಗಳನ್ನು ಹೊರತಂದಿರುವುದು ಶ್ಲಾಘನೀಯ, ರಾಮಕೃಷ್ಣಾಶ್ರಮದ 90 ವರ್ಷಗಳ ಇತಿಹಾಸದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು, ಈ ಪೈಕಿ ಅತ್ಯಂತ ಪ್ರಮುಖರು ಕುವೆಂಪು, ದೇಜಗೌ, ಸಿದ್ದೇಶ್ವರಾನಂದ ಶ್ರೀಗಳು ಹಾಗೂ ಎಸ್‌.ಎಂ.ಕೃಷ್ಣ ಎಂದರು.
ಸ್ಮೃತಿ ವಾಹಿನಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್ ವೆಂಕಟಾಚಲಯ್ಯ, ಮುಂದಿನ ಐದು ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳು ನಮ್ಮ ಶಾಸನಸಭೆಗಳಲ್ಲಿ ಸ್ಥಾನ‌ ಪಡೆದು ತಮ್ಮ ನಿಯಮಾವಳಿಗಳನ್ನು ನಮ್ಮ ಮೇಲೆ ಹೇರಿಕೆ ಮಾಡುತ್ತವೆ. ಹಾಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ಎಸ್.ಎಂ. ಕೃಷ್ಣರ ಜೀವನಗಾಥೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಚರ್ಚೆ ನಡೆಸಬೇಕು. ಎಸ್.ಎಂ.ಕೃಷ್ಣ ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕು. ಈಗಲೂ ಎಸ್.ಎಂ.ಕೃಷ್ಣ ಯಂಗ್ ಅಂಡ್ ಚಾರ್ಮಿಂಗ್ ಹಾಗೂ ಹ್ಯಾಂಡ್ ಸಮ್ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಎಸ್.ಎಂ.ಕೃಷ್ಣ ರಾಜಕೀಯಕ್ಕೆ ಬಂದ ಹೊಸದರಲ್ಲಿ ಅಮೇರಿಕಾದ ಮಾತೆಯರು ತಮ್ಮ ಮಕ್ಕಳಿಗೆ..ಮಕ್ಕಳೇ ಬೇಗ ನಿಮ್ಮ ಆಹಾರವನ್ನು ತಿಂದು ಮುಗಿಸಿ ಇಲ್ಲವಾದರೆ ಭಾರತದ ಬಡ ಮಕ್ಕಳು ಬಂದು ನಿಮ್ಮ ಆಹಾರವನ್ನು ಕಸಿದುಕೊಂಡಾರು ಎಂದು ಹೇಳುತ್ತಿದ್ದರು. ಎಸ್.ಎಂ.ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾದಾಗ ಅದೇ ಅಮೇರಿಕಾದ ಮಾತೆಯರು ತಮ್ಮ ಮಕ್ಕಳಿಗೆ ಮಕ್ಕಳೇ ನೀವು ಚೆನ್ನಾಗಿ ಓದಿ ಮುಂದೆ ಬನ್ನಿ ಇಲ್ಲವಾದರೆ ಭಾರತದ ಮಕ್ಕಳು ಬಂದು ನಿಮ್ಮ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ ಎಂದು ಎಚ್ಚರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಬರಾಕ್ ಒಬಾಮ ಅಧ್ಯಕ್ಷರಾದ ನಂತರ ಹೋದೆಡೆಯಲ್ಲೆಲ್ಲಾ ಏನು ಹೇಳುತ್ತಿದ್ದರು ಎಂದು ಎಲ್ಲರಿಗೂ ಗೊತ್ತೇ ಇದೆ. ಇದು ಕೃಷ್ಣ ಅವರ ಸಾಧನೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷದ ಪ್ರತಿನಿಧಿಗಳಂತೆ ಸಂಸದ ಜಿ.ಎಸ್.ಬಸವರಾಜ್,ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ದಾಸರಳ್ಳಿ ಶಾಸಕ ಮಂಜುನಾಥ್ ಅವರು ಎಸ್.ಎಂ.ಕೃಷ್ಣ ಅವರನ್ನು ಸನ್ಮಾನಿಸಿದರು.
ಮಾಜಿ ರಾಜಕೀಯ ಸ್ನೇಹಿತರ ಪುನರ್ ಮಿಲನಕ್ಕೆ ಎಸ್.ಎಂ.ಕೃಷ್ಣರ ಜೀವನಗಾಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಾಕ್ಷಿಯಾಯಿತು. ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಶಾಸಕರಾದ ಹೆಚ್.ವಿಶ್ವನಾಥ್, ಶಾಸಕ ಮಧುಗಿರಿ ಕೆ.ಎನ್.ರಾಜಣ್ಣ, ಶಾಸಕ ಗೋಪಾಲಯ್ಯ ಮತ್ತಿತರು ಭಾಗಿಯಾಗಿದ್ದರು. ಹೆಚ್.ವಿಶ್ವನಾಥರನ್ನು ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದ ಡಿ.ಕೆ.ಶಿವಕುಮಾರ್ ನಡೆ ಅಚ್ಚರಿ ಮೂಡಿಸಿತ್ತು.
ಕೃತಿಗಳ ಮುದ್ರಣಕ್ಕಾಗಿ ಕಾಗದ ಬಳಸಿ ಮರಗಳಿಗೆ ಪರೋಕ್ಷವಾಗಿ ಕೊಡಲಿ ಪೆಟ್ಟು ನೀಡಿದ್ದಕ್ಕೆ ಪ್ರತಿಯಾಗಿ ತಿಪ್ಪಗೊಂಡನಹಳ್ಳಿಯಲ್ಲಿ‌ ಸಸಿಗಳ ನೆಡಲು 25 ಸಾವಿರ ರೂ.ಗಳನ್ನು ಕೃಷ್ಣಪಥಕ್ಕೆ ಎಸ್.ಎಂ ಕೃಷ್ಣ ದೇಣಿಗೆ ನೀಡಿದರು. ಆ ಮೂಲಕ ಪರಿಸರ ಕಾಳಜಿ ಮೆರೆದು ಇತರರಿಗೆ ಮಾದರಿಯಾದರು.

Related posts

ಸಂಸ್ಕೃತ ಎಲ್ಲ ಭಾಷಿಕರನ್ನು ಜೋಡಿಸುವ ಭಾಷೆ

Times fo Deenabandhu

ಲವರ್ ಜತೆಗಿನ ಮದುವೆ ತಪ್ಪಿಸಲು ಈತ ಮಾಡಿದ್ದ ಪ್ಲ್ಯಾನ್ ಕೇಳಿ ಪೊಲೀಸರೇ ಸುಸ್ತು…!

Times fo Deenabandhu

ರಾಜ್ಯದಲ್ಲಿ ರಣಕೇಕೆ ಹಾಕಿದ ಕೊರೊನಾ: ಬರೋಬ್ಬರಿ 918 ಜನರಿಗೆ ಸೋಂಕು – 11 ಸಾವು ..ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ ಸೋಂಕು…….ಇಲ್ಲಿದೆ ಫುಲ್ ಡೀಟೈಲ್ಸ್……