Times of Deenabandhu
  • Home
  • ಪ್ರಧಾನ ಸುದ್ದಿ
  • ರಾಜ್ಯದ ಹೆದ್ದಾರಿಗಳಲ್ಲಿ 942 ‘ಬ್ಲಾಕ್‌ ಸ್ಪಾಟ್‌’ಗಳು ಅಪಘಾತ ತಡೆಗೆ ಅಗತ್ಯ ಕ್ರಮ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ರಾಜ್ಯದ ಹೆದ್ದಾರಿಗಳಲ್ಲಿ 942 ‘ಬ್ಲಾಕ್‌ ಸ್ಪಾಟ್‌’ಗಳು ಅಪಘಾತ ತಡೆಗೆ ಅಗತ್ಯ ಕ್ರಮ

ಬೆಂಗಳೂರು: ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚಿರುವ ಒಟ್ಟು 942 ‘ಬ್ಲಾಕ್‌ ಸ್ಪಾಟ್‌’ಗಳನ್ನು ಗುರುತಿಸಲಾಗಿದ್ದು, ರಸ್ತೆ ತಿರುವುಗಳನ್ನು ಸರಿಪಡಿಸುವುದು ಸೇರಿ ಈ ಸ್ಥಳಗಳಲ್ಲಿ ಅಪಘಾತ ಮರುಕಳಿಸದಂತೆ ತಡೆಯಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸೌಧ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,”ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿ 249 ಸೇರಿ ಒಟ್ಟು 942 ಬ್ಲಾಕ್‌ಸ್ಪಾಟ್‌ಗಳಿವೆ. ಈ ಸ್ಥಳಗಳಲ್ಲಿ ಪದೇಪದೆ ಅಪಘಾತ ಸಂಭವಿಸುತ್ತಿವೆ. ತಿರುವುಗಳನ್ನು ನೇರಗೊಳಿಸಲು ಅಗತ್ಯವಿರುವ ಕಡೆಗಳಲ್ಲಿ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕ್ರಮ ವಹಿಸಲಾಗಿದೆ,” ಎಂದು ತಿಳಿಸಿದರು.

”ರಸ್ತೆಗಳ ಗುಣಮಟ್ಟ ಹಾಗೂ ವಿಸ್ತರಣೆ ಬಳಿಕ ವೇಗದ ಚಾಲನೆಯೂ ಅಪಘಾತಗಳಿಗೆ ಕಾರಣವಾಗುತ್ತಿದೆ. ಕೆಲವು ಹೆದ್ದಾರಿಗಳಲ್ಲಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸಲಾಗುತ್ತಿದೆ. ಇದೂ ಕೂಡ ಅಪಘಾತ ಹೆಚ್ಚಲು ಕಾರಣವಾಗಿದೆ. ಗುಣಮಟ್ಟದ ರಸ್ತೆಗಳನ್ನು ಈ ರೀತಿ ದುರುಪಯೋಗ ಮಾಡಿಕೊಂಡು ವೇಗವಾಗಿ ವಾಹನ ಚಲಾಯಿಸುವುದನ್ನು ತಡೆಯುವ ಬಗ್ಗೆಯೂ ಗಮನ ಹರಿಸಬೇಕಿದೆ. ಸಾರಿಗೆ ಇಲಾಖೆ ಮೂಲಕ ಈ ಪ್ರಯತ್ನ ನಡೆಸಲಾಗುವುದು,” ಎಂದು ಹೇಳಿದರು.

ಮರುನಿರ್ಮಾಣಕ್ಕೆ ಆದ್ಯತೆ
”ನೆರೆ ಮತ್ತು ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆಗಳ ಮರುನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. 2020 -21ನೇ ಸಾಲಿನ ಬಜೆಟ್‌ನಲ್ಲಿಇಲಾಖೆ ಕಾರ್ಯಕ್ರಮಗಳಲ್ಲಿಈ ಉದ್ದೇಶಕ್ಕೆ ಒತ್ತು ನೀಡಲಾಗುತ್ತಿದೆ,” ಎಂದು ಕಾರಜೋಳ ತಿಳಿಸಿದರು.

”ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳನ್ನು ತಾತ್ಕಾಲಿಕವಾಗಿ ಸಂಚಾರ ಯೋಗ್ಯ ಮಾಡಲಾಗಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿತಾಂತ್ರಿಕ ಕಾರಣಗಳಿಂದಾಗಿ ಶಾಶ್ವತ ಕಾಮಗಾರಿ ವಿಳಂಬವಾಗಿವೆ,” ಎಂದರು.

ಫಾಸ್ಟ್‌ ಟ್ಯಾಗ್‌ ತೊಂದರೆ
”ಟೋಲ್‌ ರಸ್ತೆಗಳಲ್ಲಿಫಾಸ್ಟ್‌ ಟ್ಯಾಗ್‌ ಜಾರಿಯಿಂದ ಆಗುತ್ತಿರುವ ತೊಂದರೆಗಳನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಗಮನಕ್ಕೆ ತರಲಾಗಿದೆ. ಟೋಲ್‌ ಪಾವತಿಗಾಗಿ ಠೇವಣಿ ಕಾಯ್ದಿರಿಸುವ ಸಮಸ್ಯೆ ಬಗ್ಗೆ ದೂರುಗಳಿವೆ. ಎರಡೂ ಬದಿ ಸಂಚಾರಕ್ಕೆ ಒಂದೇ ಬಾರಿ ಪಾವತಿಸಿದರೆ ವಿನಾಯಿತಿ ಸೌಲಭ್ಯ ಮುಂದುವರಿದಿಲ್ಲ. ಈ ಎಲ್ಲನೂನ್ಯತೆಗಳನ್ನು ಕೇಂದ್ರ ಸಚಿವರ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡಲಾಗುವುದು,” ಎಂದು ಭರವಸೆ ನೀಡಿದರು.

ರೇಸ್‌ಕೋರ್ಸ್‌ ಜಾಗ ವಾಪಸ್‌
”ಬೆಂಗಳೂರು ಟಫ್‌ರ್‍ ಕ್ಲಬ್‌ ಗುತ್ತಿಗೆ ಅವಧಿ 2009ಕ್ಕೆ ಮುಗಿದಿದ್ದು, ಈ ಜಾಗವನ್ನು ವಾಪಸ್‌ ಪಡೆಯಲು ಸರಕಾರ ನಿರ್ಧರಿಸಿದೆ. ಸುಪ್ರೀಂಕೋರ್ಟ್‌ನಲ್ಲಿಜ.29ಕ್ಕೆ ಪ್ರಕರಣ ವಿಚಾರಣೆಗೆ ಬರಲಿದ್ದು, ಶೀಘ್ರ ಇತ್ಯರ್ಥವಾಗುವಂತೆ ಕ್ರಮ ವಹಿಸಲು ಸರಕಾರಿ ವಕೀಲರಿಗೆ ಸೂಚಿಸಲಾಗಿದೆ. ಸದ್ಯ ಟಫ್‌ರ್‍ ಕ್ಲಬ್‌ನಿಂದ ಸರಕಾರಕ್ಕೆ ಬರಬೇಕಿರುವ 37 ಕೋಟಿ ರೂ. ಬಾಕಿ ಮೊತ್ತವನ್ನು ವಸೂಲು ಮಾಡಲೂ ಕ್ರಮ ಜರುಗಿಸಲಾಗಿದೆ,” ಎಂದು ತಿಳಿಸಿದರು.

Related posts

ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್

Times fo Deenabandhu

6 ಜಲಾಂತರ್ಗಾಮಿ ನಿರ್ಮಾಣಕ್ಕೆ ಸಿದ್ಧತೆ

Times fo Deenabandhu

ವಚನಾನಂದ ಶ್ರೀ ಬೆದರಿಕೆ ವಿವಾದ, ಯಡಿಯೂರಪ್ಪ ಬಳಿ ಕ್ಷಮೆ ಕೋರಿದ ನಿರಾಣಿ

Times fo Deenabandhu