Times of Deenabandhu
  • Home
  • ಮುಖ್ಯಾಂಶಗಳು
  • ವಿಂಡೀಸ್​ ವಿರುದ್ಧ ಏಕದಿನ ಸರಣಿ ಗೆಲುವಿನೊಂದಿಗೆ 2019ಕ್ಕೆ ರೋಚಕ ವಿದಾಯ ಹೇಳಿದ ಕೊಹ್ಲಿ ಪಡೆ!
ಕ್ರೀಡೆ ಮುಖ್ಯಾಂಶಗಳು

ವಿಂಡೀಸ್​ ವಿರುದ್ಧ ಏಕದಿನ ಸರಣಿ ಗೆಲುವಿನೊಂದಿಗೆ 2019ಕ್ಕೆ ರೋಚಕ ವಿದಾಯ ಹೇಳಿದ ಕೊಹ್ಲಿ ಪಡೆ!

ಕಟಕ್​: ನಾಯಕ ವಿರಾಟ್​ ಕೊಹ್ಲಿ(85), ರೋಹಿತ್​ ಶರ್ಮಾ(63) ಮತ್ತು ಕೆ.ಎಲ್​.ರಾಹುಲ್(77) ಅವರ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಟೀಮ್​ ಇಂಡಿಯಾ ಪ್ರವಾಸಿ ವೆಸ್ಟ್​ಇಂಡೀಸ್​ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 4 ವಿಕೆಟ್​ಗಳ ಅಮೋಘ ಜಯ ಸಾಧಿಸಿತು. 2-1 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳುವ ಮೂಲಕ 2019ನೇ ವರ್ಷಕ್ಕೆ ಸಂತೋಷದ ವಿದಾಯ ಹೇಳಿದೆ.

ಕಟಕ್​ನ ಬಾರಬತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್​ ಪಡೆ ನೀಡಿದ 316 ರನ್​ಗಳ ಗುರಿ ಬೆನ್ನತ್ತಿದ ಭಾರತ 48.4 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 316 ರನ್​ ಕಲೆಹಾಕುವ ಮೂಲಕ ಸರಣಿ ಗೆಲುವಿನ ಸಿಹಿಯುಂಡಿತು.

ಉತ್ತಮ ಆರಂಭ
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ(63 ರನ್​, 63 ಎಸೆತ, 8 ಬೌಂಡರಿ, 1 ಸಿಕ್ಸರ್​) ಮತ್ತು ಕೆ.ಎಲ್​.ರಾಹುಲ್​ (77 ರನ್​, 89 ಎಸೆತ, 8 ಬೌಂಡರಿ, 1 ಸಿಕ್ಸರ್​) ಮೊದಲ ವಿಕೆಟ್​ಗೆ 122 ರನ್​ಗಳ ಜತೆಯಾಟ ಆಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ತಂಡದ ಮೊತ್ತ 122 ರನ್​ ಆಗಿದ್ದಾಗ ರೋಹಿತ್​ ಮತ್ತು 167 ಆಗಿದ್ದಾಗ ರಾಹುಲ್​ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​(7), ರಿಷಭ್​ ಪಂತ್​(7) ಹಾಗೂ ಕೇದರ್​ ಜಾಧವ್​ (9) ರನ್ ಗಳಿಸಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು.

ನಾಯಕ ಕೊಹ್ಲಿ ಹೋರಾಟ
ಮೂರನೇ ವಿಕೆಟ್ ಆಗಿ ಕ್ರೀಸ್​ಗೆ ಇಳಿದಿದ್ದ ನಾಯಕ ವಿರಾಟ್​ ಕೊಹ್ಲಿ ವಿಕೆಟ್​ಗಳ ಪತನದ ನಡುವೆಯೂ ಏಕಾಂಗಿ ಹೋರಾಟ ನಡೆಸಿದರು. ವೆಸ್ಟ್​ಇಂಡೀಸ್​ ಬೌಲರ್​ಗಳನ್ನು ಕಾಡಿದ ಕೊಹ್ಲಿ 81 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 85 ರನ್​ ಗಳಿಸಿ ತಂಡದ ಮೊತ್ತ 286 ರನ್​ ಆಗಿದ್ದಾಗ ಗೆಲುವಿನ ಹೊಸ್ತಿಲಲ್ಲಿ ಎಡವಿದರು. ಕೊಹ್ಲಿ ಔಟಾಗುವ ಮುನ್ನ ರವೀಂದ್ರ ಜಡೇಜಾ ಉತ್ತಮ ಸಾಥ್​ ನೀಡಿದರು.

ಕೊನೆಯಲ್ಲಿ ಜಡೇಜಾ-ಠಾಕೂರ್​ ಮಿಂಚು
ಕೊಹ್ಲಿ ಔಟಾಗುತ್ತಿದ್ದಂತೆ ಕ್ರೀಸ್​ಗೆ ಇಳಿದ ಶಾರ್ದೂಲ್​ ಠಾಕೂರ್,​ ರವೀಂದ್ರ ಜಡೇಜಾಗೆ ಸಾಥ್​ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜಡೇಜಾ 31 ಎಸೆಗಳಲ್ಲಿ 4 ಬೌಂಡರಿಯೊಂದಿಗೆ 39 ರನ್​ ಗಳಿಸಿದರೆ, ಠಾಕೂರ್​ 6 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್​ ನರವಿನೊಂದಿಗೆ ಸ್ಫೋಟಕ 17 ರನ್​ ಗಳಿಸಿ ಅಜೇಯರಾಗಿ ಉಳಿದರು.

ವಿಂಡೀಸ್​ ಪರ ಕೀಮೋ ಪೌಲ್​ 3 ವಿಕೆಟ್​ ಕಬಳಿಸಿದರೆ, ಶೆಲ್ಡನ್​ ಕಾಟ್ರೆಲ್, ಜಾಸನ್​ ಹೋಲ್ಡರ್​ ಮತ್ತು ಅಲ್ಝರಿ ಜೋಸೆಫ್​ ತಲಾ ಒಂದು ವಿಕೆಟ್​ ಪಡೆದರು.​

ವಿಂಡೀಸ್​ ಇನ್ನಿಂಗ್ಸ್​
ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ವಿಂಡೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 315 ರನ್​ ಕಲೆಹಾಕಿತು.

ವಿಂಡೀಸ್​ ಪರ ಎವಿನ್​ ಲೆವಿಸ್​ (21), ಶಾಯ್​ ಹೋಪ್ ​(42), ರೋಸ್ಟ್​ ಚೇಸ್​ (38) ಶಿಮ್ರಾನ್​ ಹೆಟ್ಮಯರ್​ (37), ನಿಕೋಲಸ್​ ಪೂರನ್ ​(89), ಕೀರನ್​ ಪೋಲಾರ್ಡ್​ (74*) ಮತ್ತು ಜಾಸನ್​ ಹೋಲ್ಡರ್ ​(7*) ರನ್​ಗಳ ಉಪಯುಕ್ತ ಕಾಣಿಕೆ ನೀಡಿದರು.

ಟೀಮ್​ ಇಂಡಿಯಾ ಪರ ನವದೀಪ್​ ಸೈನಿ ಎರಡು ವಿಕೆಟ್​ ಪಡೆದು ಮಿಂಚಿದರೆ, ಶಾರ್ದೂಲ್​ ಠಾಕೂರ್​, ಮಹಮ್ಮದ್​ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್​ಗೆ ತೃಪ್ತಿಪಟ್ಟರು.

Related posts

ಲಾಕ್‌ಡೌನ್‌ 2: ಯಾವುದಕ್ಕೆಲ್ಲ ಅವಕಾಶ ಇಲ್ಲ, ಏನೆಲ್ಲ ನಿರ್ಬಂಧ?

Times fo Deenabandhu

ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಮೈದುಂಬುತ್ತಿರುವ ಜಲಾಶಯ

Times fo Deenabandhu

 ಕರ್ನಾಟಕ ಶಿಕ್ಷಣ ನೀತಿ ತಿಂಗಳಲ್ಲಿ ಅಂತಿಮ: ಸಚಿವ ಎಸ್.ಸುರೇಶ್‌ಕುಮಾರ್

Times fo Deenabandhu