Times of Deenabandhu
  • Home
  • ನ್ಯೂಸ್
  • ರಾಜ್ಯ
  • ಒಂದು ವೇಳೆ ಬಿಜೆಪಿಗೆ ಬಹುಮತ ಸಿಗದೆ ಇದ್ದಿದ್ದರೆ ಜೆಡಿಎಸ್‌ ಇಬ್ಭಾಗವಾಗುತ್ತಿತ್ತು
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಒಂದು ವೇಳೆ ಬಿಜೆಪಿಗೆ ಬಹುಮತ ಸಿಗದೆ ಇದ್ದಿದ್ದರೆ ಜೆಡಿಎಸ್‌ ಇಬ್ಭಾಗವಾಗುತ್ತಿತ್ತು

ಉಪ ಚುನಾವಣಾ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದೆ! ಒಂದು ವೇಳೆ ಬಿಜೆಪಿ ಕನಿಷ್ಟ 8 ಸ್ಥಾನಗಳನ್ನಾದ್ರೂ ಗೆಲ್ಲದೆ ಹೋಗಿದ್ದರೆ, ಕಾಂಗ್ರೆಸ್-ಜೆಡಿಎಸ್‌ ಮತ್ತೊಮ್ಮೆ ‘ಕೂಡಿಕೆ’ ಮಾಡಿಕೊಳ್ಳೋ ಸಾಹಸಕ್ಕೆ ಕೈ ಹಾಕಿ ಬಿಡುತ್ತಿದ್ದವು! ಇದೀಗ ಬಿಜೆಪಿ ಸರಳ ಬಹುಮತವಿರಲಿ, ಭರ್ಜರಿ ಬಹುಮತವನ್ನೇ ಸಾಧಿಸಿಬಿಟ್ಟಿದೆ. ಸರಳ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 112 ಮೆಟ್ಟಿ ನಿಂತಿದೆ. ಹೀಗಾಗಿ, ಜೆಡಿಎಸ್‌ಗೆ ಮತ್ತೊಮ್ಮೆ ಅಧಿಕಾರಕ್ಕೆ ಪ್ರಯತ್ನಿಸುವ ಚಾನ್ಸ್‌ ಮಿಸ್ ಆದ ಕೊರಗಿದೆ, ಜೊತೆಯಲ್ಲೇ ಒಂದಷ್ಟು ಸಮಾಧಾನವೂ ಇದೆ!

ಬಿಜೆಪಿಗೆ ಬಹುಮತ ಬಂದರೆ ಜೆಡಿಎಸ್‌ಗೆ ಸಮಾಧಾನವೇಕೆ?

ಈ ಉಪ ಚುನಾವಣೆಯಲ್ಲಿ ಮ್ಯಾಜಿಕ್ ನಂಬರ್ 112 ತಲುಪಲೇ ಬೇಕಿತ್ತು ಬಿಜೆಪಿ. ಇದಕ್ಕಾಗಿ ಕನಿಷ್ಟ 8 ಸ್ಥಾನಗಳನ್ನು ಗಳಿಸಲೇಬೇಕಾದ ಒತ್ತಡವಿತ್ತು. ಒಂದು ವೇಳೆ 8 ಸ್ಥಾನಗಳನ್ನು ಈ ಉಪ ಚುನಾವಣೆಯಲ್ಲಿ ಬಿಜೆಪಿ ಗಳಿಸದೇ ಇದ್ದಿದ್ದರೆ, ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿತ್ತು. ವಿಧಾನಸಭೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಮಾಡಲೇಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದರು. ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗದೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗುವ ಸಾಧ್ಯತೆ ಇತ್ತು. ಆ ಸಂದರ್ಭದಲ್ಲಿ ಮತ್ತಷ್ಟು ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗುತ್ತಿತ್ತು ಎಂಬ ಆತಂಕ ಕಾಂಗ್ರೆಸ್-ಜೆಡಿಎಸ್‌ಗೆ ಇದ್ದೇ ಇತ್ತು.

ಕಾಂಗ್ರೆಸ್‌ಗಿಂತಾ ಹೆಚ್ಚಾಗಿ ಜೆಡಿಎಸ್‌ಗೆ ಆಪರೇಷನ್ ಕಮಲದ ಆತಂಕ ಇತ್ತು. ಇದಕ್ಕೆ ಪುಷ್ಠಿ ನೀಡುವಂತೆ ವಿಜಯಪುರದ ಇಬ್ಬರು ಜೆಡಿಎಸ್‌ ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಉಪ ಚುನಾವಣಾ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ, ‘ಒಂದು ವೇಳೆ ಬಿಜೆಪಿಗೆ ಬಹುಮತ ಸಿಗದೆ ಇದ್ದಿದ್ದರೆ ಜೆಡಿಎಸ್‌ ಇಬ್ಭಾಗವಾಗುತ್ತಿತ್ತು’ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್‌ನ ಅರ್ಧದಷ್ಟು ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು ಕಾರ್ಯತಂತ್ರ ರೂಪಿಸಿತ್ತು ಅನ್ನೋದು ಹೊರಟ್ಟಿ ಹೇಳಿಕೆ ಹಿಂದಿನ ಆರೋಪ. ಹೊರಟ್ಟಿ ಅವರ ಈ ಹೇಳಿಕೆಯೇ ಜೆಡಿಎಸ್‌ಗಿದ್ದ ಭಯವನ್ನು ಬಿಂಬಿಸುತ್ತದೆ.
ಇದೀಗ ಬಿಜೆಪಿಗೆ ಬಹುಮತ ಸಿಕ್ಕಿರೋದ್ರಿಂದ ಜೆಡಿಎಸ್‌ಗೆ ಪಕ್ಷ ಇಬ್ಬಾಗವಾಗುವ ಭಯ ದೂರವಾಗಿರಬಹುದು. ಆದ್ರೆ, ಮುಂದಿನ ಮೂರೂವರೆ ವರ್ಷಗಳ ರಾಜಕೀಯ ಹಾದಿ ಹಾಗೂ ಆ ನಂತರದ ಚುನಾವಣಾ ರಾಜಕೀಯ ಭವಿಷ್ಯ ನಿಜಕ್ಕೂ ಕಂಗೆಡಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅನಾರೋಗ್ಯದಿಂದ ಬಳಲುತ್ತಿದ್ದರೂ, ರಾಜಕೀಯವಾಗಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಈ ಹಂತದಲ್ಲಿ ದೇವೇಗೌಡರೂ ಕೂಡಾ ಮತ್ತೆ ಫೀನಿಕ್ಸ್‌ನಂತೆ ಮೇಲೆದ್ದು ಪಕ್ಷವನ್ನು ಕಟ್ಟುವ ಕೆಲಸ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ರೇವಣ್ಣ, ಪ್ರಜ್ವಲ್ ಹಾಗೂ ನಿಖಿಲ್ ನೆರವಿನಿಂದ ಮತ್ತೊಮ್ಮೆ ಪಕ್ಷವನ್ನು ಪುಟಿದೇಳುವಂತೆ ಮಾಡಲು ‘ಮಣ್ಣಿನ ಮಗ’ ಯಾವ ದಾಳ ಉರುಳಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Related posts

ಒಂದೇ ರಾತ್ರಿಗೆ 1,700 ಜನರ ಜೀವ ತೆಗೆದಿತ್ತು ಈ ಕೆರೆ…!

Times fo Deenabandhu

ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಶ್ರೀನಿವಾಸ ಪ್ರಸಾದ್‌

Times fo Deenabandhu

ಶಿವಮೊಗ್ಗ ರೈಲ್ವೇ ಸಂಪರ್ಕ ಇನ್ನಷ್ಟು ಅಭಿವೃದ್ಧಿಗೆ ಕ್ರಮ: ಸಂಸದ ಬಿ.ವೈ.ರಾಘವೇಂದ್ರ

Times fo Deenabandhu