Times of Deenabandhu
  • Home
  • ಜಿಲ್ಲೆ
  • ಸೈನಿಕರ ಕಲ್ಯಾಣದ ಜವಾಬ್ದಾರಿ ಸಾರ್ವಜನಿಕರದ್ದು
ಜಿಲ್ಲೆ ಶಿವಮೊಗ್ಗ

ಸೈನಿಕರ ಕಲ್ಯಾಣದ ಜವಾಬ್ದಾರಿ ಸಾರ್ವಜನಿಕರದ್ದು

ಶಿವಮೊಗ್ಗ: ತ್ಯಾಗ ಮತ್ತು ಸಮರ್ಪಣೆಯಿಂದ ದೇಶ ಸೇವೆ ಮಾಡುತ್ತಿರುವ ಸೈನಿಕರ ಕಲ್ಯಾಣದ ಜವಾಬ್ದಾರಿ ಎಲ್ಲ ಸಾರ್ವಜನಿಕರ ಮೇಲಿದ್ದು, ಸಶಸ್ತ್ರ ಪಡೆಗಳ ಧ್ವಜಾ ದಿನಾಚರಣೆಯನ್ನು ನಾವು ನಮ್ಮಿಂದ ಕೈಲಾದಷ್ಟು ಧ್ವಜ ಖರೀದಿ ಮಾಡಿ ಧನ ಸಹಾಯ ಮಾಡಿದಾಗ ಸ್ವಲ್ಪಮಟ್ಟಿಗಾದರೂ ಕರ್ತವ್ಯ ನಿರ್ವಹಿಸಿದ ಭಾವನೆ ಬರುತ್ತದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಹೇಳಿದ್ದಾರೆ.

ಅವರು ಇಂದು ನಗರದ ಸರ್ಕಾರಿ ನೌಕರರ ಭವನದ ಬಳಿ ಇರುವ ಸೈನಿಕ ಪಾರ್ಕ್‌ನಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಹಮ್ಮಿಕೊಂಡಿದ್ದ ಸಶಸ್ತ್ರಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಹುತಾತ್ಮರಾದ ಸೈನಿಕರ ಸಮರ್ಪಣೆಯ ದಿನವಾಗಿದ್ದು, ನಮ್ಮನ್ನೆಲ್ಲ ನೆಮ್ಮದಿಯಲ್ಲಿರಿಸಿ ತಮ್ಮ ತ್ಯಾಗ ಮತ್ತು ಬಲಿದಾನಗಳಿಂದ ಗಡಿಕಾಯುವ ಯೋಧರಿಗೆ ನಾವು ಎಷ್ಟೇ ನೆರವು ನೀಡಿದರೂ ಅದು ಕಡಿಮೆಯೇ ಎಂದರು.

ಸೈನಿಕರ ಜೊತೆಗೆ ದೇಶದ ಜನತೆ ನಾವು ಸದಾ ಬೆಂಬಲಕ್ಕಿದ್ದೇವೆ ಎನ್ನುವ ಮನೋಭಾವ ಮತ್ತು ಧೈರ್ಯವನ್ನು ದೇಶದ ಜನತೆ ತೋರಿಸಬೇಕಿದೆ. ಇದಕ್ಕಾಗಿ ಮುಕ್ತ ಮನಸ್ಸಿನಿಂದ ನಾವು ಸೈನಿಕ ಕಲ್ಯಾನ ನಿಧಿಗೆ ನೆರವು ನೀಡಬೇಕು. ದೇಶದಲ್ಲಿ ಮೊದಲು ಅನ್ನ ನೀಡುವ ರೈತ ಬಿಟ್ಟರೆ ಸೈನಿಕನೇ ಶ್ರೇಷ್ಠ. ಅದಕ್ಕಾಗಿಯೇ ಅಂದಿನ ಪ್ರಧಾನಿ ಲಾಲ್‌ಬಹದ್ದೂರು ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯವನ್ನು ಘೋಷಣೆ ಮಾಡಿದರು. ಈ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಸಶಸ್ತ್ರ ಪಡೆಗಳ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು.

ಮಾಜಿ ಸೈನಿಕ ಹಾಗೂ ಹಾಲಿ ಉಪವಿಭಾಗಾಧಿಕಾರಿ ಟಿ.ಪ್ರಕಾಶ್ ಮಾತನಾಡಿ, ತಮ್ಮ ಬಹುಪಾಲಿನ ಸಮಯವನ್ನು ಸೈನ್ಯದಲ್ಲಿ ಕಳೆದು ನಿವೃತ್ತಿಯಾದ ಯೋಧರಿಗೆ ನಂತರದ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿ ಬಾಳಲು ಅನೇಕ ತೊಡಕುಗಳಿವೆ. ಬಾಯಿ ಮಾತಿನಲ್ಲಿ ಸರ್ಕಾರ ಸೈನಿಕ ಕಲ್ಯಾಣದ ಬಗ್ಗೆ ಎಷ್ಟೇ ಭರವಸೆ ನೀಡಿದರೂ ನಿವೃತ್ತಿಯಾದ ಸೈನಿಕನಿಗೆ ಒಂದು ನಿವೇಶನ ಪಡೆಯಲು ಸರ್ಕಾರದ ನಿಯಮಗಳ ಪ್ರಕಾರ ಆರ್ಥಿಕ ಮಿತಿಯಿಂದಾಗಿ ತೊಂದರೆಯಾಗಿದೆ. ಈ ಬಗ್ಗೆ ಸೈನಿಕರಿಗೆ ಸರ್ಕಾರ ವಸತಿ ಯೋಜನೆಗಳಲ್ಲಿ ನಿವೇಶನ ಕಾಯ್ದಿರಿಸುವುದಲ್ಲದೇ ಆದಾಯ ಮಿತಿಯ ನಿಯಮಗಳನ್ನು ಸಡಿಲಗೊಳಿಸುವ ಕಾನೂನು ಜಾರಿಗೊಳಿಸಬೇಕು ಮತ್ತು ಅವರಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮಾಜಿ ಸೈನಿಕಸಂಘದ ಅಧ್ಯಕ್ಷರಾದ ಕೃಷ್ಣಾರೆಡ್ಡಿ, ಆಯುಕ್ತ ಚಿದಾನಂದ ವಟಾರೆ, ಕರ್ನಲ್ ಡಾ.ರಘುನಾಥ್ ಮತ್ತಿತರರಿದ್ದರು.

Related posts

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ  ನೂತನ ಅಧ್ಯಕ್ಷರಾಗಿ ಕೆ.ಎಸ್.ಗುರುಮೂರ್ತಿ ಅಧಿಕಾರ ಸ್ವೀಕಾರ….

ಅಂಬಳೆ ಗ್ರಾಮದ ಕೆ.ಜಿ.ಬಿ.ಶಾಖೆ ಸ್ಥಳಾಂತರ

Times fo Deenabandhu

ಕುವೆಂಪು ವಿವಿಯಲ್ಲಿ ಹಾವನೂರು ವರದಿ ಶಿಫಾರಸ್ಸುಗಳ ಪರಿಣಾಮಗಳ ಕುರಿತ ವಿಚಾರ ಸಂಕಿರಣ : ಹಾವನೂರು ವರದಿಯಿಂದ ಸಾಮಾಜಿಕ ನ್ಯಾಯದ ಅನುಷ್ಠಾನ

Times fo Deenabandhu