Times of Deenabandhu
 • Home
 • ಧರ್ಮ
 • ಸುಜ್ಞಾನ ಹಾಗೂ ವಿಜ್ಞಾನದಿಂದೊಡಗೂಡಿದ ಜ್ಞಾನದ ಮಹಾಮನೆಯನ್ನಾಗಿಸಿದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ…
ಅಂಕಣ ಜಿಲ್ಲೆ ಧರ್ಮ ಮಂಡ್ಯ ರಾಜ್ಯ

ಸುಜ್ಞಾನ ಹಾಗೂ ವಿಜ್ಞಾನದಿಂದೊಡಗೂಡಿದ ಜ್ಞಾನದ ಮಹಾಮನೆಯನ್ನಾಗಿಸಿದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ…

ಪೂಜ್ಯ ಶ್ರೀ ಶ್ರೀ  ಪ್ರಸನ್ನನಾಥ ಸ್ವಾಮೀಜಿಯವರ  ಜನ್ಮದಿನದ ನಿಮಿತ್ತ ವಿಶೇಷ ಲೇಖನ

ಪೂಜ್ಯರಿಗೆ ಹುಟ್ಟು ಹಬ್ಬದ ಶುಭಾಷಯಗಳು

ಋತುಮಾನಕ್ಕೊಂದು ರೂಪತಾಳುವ ಮುಂಜಾವು, ನಡುಹಗಲು, ಸಂಜೆಗೊಂದು ಬಣ್ಣವಾಗುವ ನಿತ್ಯಹಸಿರಿನ ಸುಂದರ ಪ್ರಕೃತಿ ನಮ್ಮ ಮಲೆಘಟ್ಟಗಳ ರಂಗದಲ್ಲಿ ಚಿರವಿನೂತನ ಲಾಸ್ಯವಾಡುವ ಪ್ರಾಕೃತಿಕ ಸೊಬಗಿನ, ಕನ್ನಡನಾಡಿನ ಹೆಮ್ಮೆಯ ತವರೂರು ಮಲೆನಾಡಿನ ದ್ವಾರಬಾಗಿಲು ನಮ್ಮೆಲ್ಲರ ಪ್ರೀತಿಯ ಸಿಹಿಮೊಗೆ.

ಶಿವಮೊಗ್ಗ ಜಿಲ್ಲೆ ಈ ನಾಡಿನ, ದೇಶದ ನೆಲದ ರಾಜಕೀಯ, ಶೈಕ್ಷಣಿಕ, ಸಾಂಸ್ಕøತಿಕ, ಸಾಹಿತ್ಯಲೋಕಕ್ಕೆ, ಧರ್ಮ, ಅಧ್ಯಾತ್ಮದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.

ಇತಿಹಾಸ ಪ್ರಸಿದ್ಧವಾದ ಈ ಜಿಲ್ಲೆಯಲ್ಲಿ ಸಾವಿರಾರು ಸಾಧಕರು ಮತ್ತು ಸಂಗತಿಗಳಿವೆ. ಈ ಎಲ್ಲವನ್ನು ಮೆಲುಕು ಹಾಕುತ್ತ ಹೊರಟರೆ ಶಿವಮೊಗ್ಗದ ಶರಾವತಿ  ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆ ಮತ್ತು ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಹೆಸರು ಬೆಸೆದುಕೊಳ್ಳುತ್ತದೆ.

ಪುರಾಣೇತಿಹಾಸ ಹಿನ್ನೆಲೆಯುಳ್ಳ ಶ್ರೀ ಆದಿಚುಂಚನಗಿರಿ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯಜಿಲ್ಲೆ , ನಾಗಮಂಗಲ  ತಾಲ್ಲೂಕಿನಲ್ಲಿದೆ. ಪುರಾಣದಲ್ಲಿ ಉಕ್ತವಾಗಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದುದು ತ್ರೇತಾಯುಗದಲ್ಲಿ.  ಪರಮೇಶ್ವರನೇ ಈ  ಪೀಠದ ಸ್ಥಾಪಕನು . ಈ ಮಠದ ಗುರುಪರಂಪರೆ ಸುದೀರ್ಘವಾದುದು. ಇದುವರೆಗೂ 72 ಧರ್ಮಗುರುಗಳು ಪೀಠಾಧಿಪತಿಗಳಾಗಿದ್ದಾರೆ. ನಮ್ಮ ನಾಡಿನಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಗ್ಗೆ ಜನರ ಹೃನ್ಮನದಲ್ಲಿ ಪವಿತ್ರ ಭಾವನೆಗಳಿವೆ.  ಕೇವಲ ಧರ್ಮಬೋಧೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗದೆ ಜನಸಾಮಾನ್ಯರ ಜೀವನ ಹಾಗೂ ಬದುಕನ್ನು ಸುವ್ಯವಸ್ಥಿತಗೊಳಿಸುವ ಉದಾತ್ತ ಧ್ಯೇಯವನ್ನು ಹೊಂದಿರುವ ಮಠಗಳು ತಮ್ಮ ವೈಶಿಷ್ಟಪೂರ್ಣ ಸೇವೆಯಿಂದಾಗಿ ಇಂದು ಎಲ್ಲರ ಗೌರವ ಮತ್ತು ಪ್ರೀತಿ ಪಾತ್ರವಾಗಿವೆ. ಮಠ ಮಾನ್ಯಗಳು ಸಮಾಜೋದ್ಧಾರವನ್ನೇ ಗುರಿಯಾಗಿಸಿಕೊಂಡು ದುಡಿದಾಗ ಜನಜೀವನ ಸಹಜವಾಗಿಯೇ ಉನ್ನತಿಯತ್ತ ಸಾಗುತ್ತಿದೆ, ಈ ನಿಟ್ಟಿನಲ್ಲಿ ಕರ್ನಾಟಕವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ ಮುಂತಾದ ಕ್ಷೇತ್ರಗಳಲ್ಲಿ  ಕಂಡಿರುವ ಅದ್ವೀತಿಯ ಸಾಧನೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71 ನೇ ಪೀಠಾಧಿಪತಿಗಳಾಗಿದ್ದು  ಚುಂಚನಗಿರಿಯನ್ನು ಚಿನ್ನದಗಿರಿಯನ್ನಾಗಿಸಿದ ಯುಗಯೋಗಿ ಪರಮಪೂಜ್ಯ ಜಗದ್ಗುರು  ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೊಡುಗೆ ಅತ್ಯಮೂಲ್ಯ.

ಪರಮಪೂಜ್ಯ ಜಗದ್ಗುರುಗಳು 1984 ರಲ್ಲಿ ಶಿವಮೊಗ್ಗದ ಶರಾವತಿ ನಗರದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯನ್ನು ಪ್ರಾರಂಭಿಸಿದರು. ತಮ್ಮ ಕೃಪಾಕಟಾಕ್ಷದಲ್ಲಿದ್ದ ನೂರಾರು ಶಿಷ್ಯರುಗಳಲ್ಲಿ ಅರ್ಹರರನ್ನು ಆರಿಸುತ್ತಿದ್ದಾಗ ಪೂಜ್ಯ  ಶ್ರೀ ಶ್ರೀ ಪ್ರಸನ್ನನಾಥರು ಅವರ ತೆಕ್ಕೆಗೆ ಬಿದ್ದರು. ಇಲ್ಲಿಂದ ಸಿಹಿಮೊಗೆಯ ನೆಲದ ಜನರ ಜೀವನಸಾರ ಹೊಸ ರೀತಿಯಲ್ಲಿ ಆರಂಭವಾಯಿತು. ಶಿವಮೊಗ್ಗದ ಜನಮನದ ಜ್ಞಾನಾಭ್ಯುದಯಕ್ಕಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಮುಂಚೂಣಿ ಮಠಗಳಲ್ಲಿ ಗುರುತಿಸಬಹುದಾದ ಮೊದಲ ಹೆಸರು ಶ್ರೀ ಆದಿಚುಂಚನಗಿರಿ ಶಾಖಾಮಠ ಶಿವಮೊಗ್ಗ ಮತ್ತು ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು. ಪ್ರಸನ್ನವದನರೂ, ಸುಚಿತ್ತ, ಸುಪ್ರಸಿದ್ಧ ವಾಕ್‍ಚಾತುರ್ಯವುಳ್ಳ ಗುರುಗಳು ಶಿವಮೊಗ್ಗದ ಜಡಕಲ್ಲುಗಳಿಗೆ ಸುಂದರ ಆಕೃತಿ ನೀಡಿದ ಸ್ವಾಮೀಜಿವರು ಶಿವಮೊಗ್ಗ ನಗರದ ಹೊಸ ಮನ್ವಂತರಕ್ಕೆ ನಾಂದಿಯಾದರು.

ಒಂದು ಕಾಲಕ್ಕೆ ಸಂನ್ಯಾಸಿಗಳಿಗೆ “ ಸಂನ್ಯಾಸಧರ್ಮವೇ” ಪ್ರಧಾನವಾಗಿತ್ತು ಆದರೆ ಪೂಜ್ಯರು ಸಂನ್ಯಾಸ ಧರ್ಮದೊಂದಿಗೆ ಸಮಾಜಧರ್ಮವನ್ನು ಸೇರಿಸಿ ಜೀವನ ನಡೆಸುತ್ತಿರುವವರು ಈ ದೃಷ್ಟಿಯಿಂದ ಸ್ವಾಮೀಜಿಯವರು ಅಯಸ್ಕಾಂತದಂತೆ ಶಿವಮೊಗ್ಗದ ಜನರನ್ನು ತಮ್ಮೆಡೆಗೆ ಆಕರ್ಷಿಸಿಕೊಂಡರು. ಶ್ರೀಮಠದ ಪ್ರಗತಿಗೆ ಯೋಜನೆಗಳನ್ನು ರೂಪಿಸಿ ಅವುಗಳಲ್ಲಿ ಬಹುತೇಕ ಕಾರ್ಯಗಳು ಕ್ರಮಬದ್ಧವಾಗಿ ಕೈಗೂಡುವ ಹಾಗೆ ನೋಡಿಕೊಂಡರು. ಜ್ಞಾನಪ್ರಸಾರವೇ ಸಮಾಜದ ಉನ್ನತಿಗೆ ಮೂಲಾಧಾರ ಎಂಬುದನ್ನು ಅರಿತ ಗುರುಗಳು ಜ್ಞಾನಪ್ರಸಾರಕ್ಕಾಗಿ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡರು ಅಲ್ಲದೆ ಈ ಕ್ಷೇತ್ರದಲ್ಲಿ ಇಂದು ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಇಂದು ಶಿವಮೊಗ್ಗ ಶಾಖಾಮಠ 29 ವರ್ಷವನ್ನು ಪೂರೈಸಿ ಮುಂದೆ ಸಾಗುತ್ತಿರುವ ಸುಸಂದರ್ಭದಲ್ಲಿ ಹಿಂತಿರುಗಿ ನೋಡಿದರೆ ಚೈತನ್ಯದ ಚಿಲುಮೆಯಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಹತ್ತಿಬಂದ ಮೆಟ್ಟಿಲುಗಳು ನೂರಾರು. ಶ್ರೀಮಠವನ್ನು ಸುಜ್ಞಾನ ಹಾಗೂ ವಿಜ್ಞಾನದಿಂದೊಡಗೂಡಿದ ಜ್ಞಾನದ ಮಹಾಮನೆಯನ್ನಾಗಿಸಿ, ಅಜ್ಞಾನದಿಂದ ಕೂಡಿದ ಜನಮನದ ಅಂಧಕಾರವನ್ನು ತೊಲಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಪೂಜ್ಯ ಸದ್ಗುರುಗಳು ಅನ್ನ, ಅಕ್ಷರ ಅನುಕಂಪ, ಅರಣ್ಯ, ಆಶ್ರಯ ಆರೋಗ್ಯ  ಅಧ್ಯಾತ್ಮ ಎಂಬ ಅಷ್ಟ ತತ್ತ್ವಗಳನ್ನು ಪರಮಪೂಜ್ಯರಿಂದ  ಕಲಿತು ತಾವು ಸಹ ತಮ್ಮ ಶಾಖೆಯಲ್ಲಿ ಇವೆಲ್ಲವುಗಳನ್ನು ಬೆಳೆಸುವ ಪ್ರಯತ್ನದಲ್ಲಿದ್ದಾರೆ . ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಕಾಲಿಟ್ಟ ಕಡೆಯೆಲ್ಲ ಶಿಸ್ತು, ಸ್ವಚ್ಛತೆ ಉತ್ಸಾಹವೇ ತುಂಬಿ ಹರಿದು ಸದೃಢ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣದ ಅಡಿಗಲ್ಲಾಗಿ ನಿಂತಿದ್ದಾರೆ.

 

ತ್ರಿವಿಧ ದಾಸೋಹಿಗಳೆಂದು ಹೆಸರಾದ ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಬೆಳೆದು ತಮ್ಮ ದರ್ಶನದೊಂದಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅವಿಸ್ಮರಣೀಯ ಸೇವೆಗಳ ಮೂಲಕ ಶಿವಮೊಗ್ಗದ ನಗರ ಜನತೆಯ ಪ್ರೀತಿ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ.

ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಅಡಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 10,000 ಕ್ಕೂ ಹೆಚ್ಚು, ಶಿಕ್ಷಣರಂಗದಲ್ಲಿ  ತೀವ್ರವಾದ ಸ್ಪರ್ಧೆಯ ನಡುವೆಯೂ ಸಹ ಪೂಜ್ಯರ ಉತ್ಸಾಹ, ಕಲ್ಪನೆ ಕುತೂಹಲ ಮತ್ತು ಕಾರ್ಯತತ್ಪರತೆಯ ಕುರುಹಾಗಿ ಇಂದಿಗೂ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಿದ್ಯಾಸಂಸ್ಥೆಗಳು ಸಂಖ್ಯೆ ಹಾಗೂ ಸತ್ವದಲ್ಲಿ ಪೈಪೋಟಿಯಿಂದ ಮುನ್ನುಗುತ್ತಿವೆ.

ಶಿವಮೊಗ್ಗ ಶಾಖಾಮಠದಿಂದ ನಡೆಸಲ್ಪಡುತ್ತಿರುವ ವಿದ್ಯಾಸಂಸ್ಥೆಗಳು.

 1. ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲಮಾಧ್ಯಮ ಪ್ರೌಢಶಾಲೆ, ಶರಾವತಿ ನಗರ, ಶಿವಮೊಗ್ಗ
 2. ಶ್ರೀ ಆದಿಚುಂಚನಗಿರಿ ಸಂಯುಕ್ತ ಕನ್ನಡ ಮಾಧ್ಯಮ ಶಾಲೆ, ಶಿವಮೊಗ್ಗ.
 3. ಶ್ರೀ ಆದಿಚುಂಚನಗಿರಿ ಸಂಯುಕ್ತ ಸ್ವತಂತ್ರ ವಿಜ್ಞಾನ ಪದವಿ ಪೂರ್ವಕಾಲೇಜು, ಶಿವಮೊಗ್ಗ.
 4. ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆ, ಶರಾವತಿ ನಗರ, ಶಿವಮೊಗ್ಗ.
 5. ಬಿಜಿಎಸ್ ಆಂಗ್ಲಮಾಧ್ಯಮ ಶಾಲೆ, ಗುರುಪುರ.
 6. ಎಸ್‍ಎವಿ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ನ್ಯೂಟೌನ್ ಭದ್ರಾವತಿ.
 7. ಎಸ್‍ಎವಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ನ್ಯೂಟೌನ್, ಭದ್ರಾವತಿ.
 8. ಶ್ರೀ ಆದಿಚುಂಚನಗಿರಿ ಸಂಯುಕ್ತ ಪದವಿ ಪೂರ್ವಕಾಲೇಜು ,ನ್ಯೂಟೌನ್ ಭದ್ರಾವತಿ.
 9. ಎಸ್‍ಎವಿ ಹಿರಿಯ ಪ್ರಾಥಮಿಕ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆ, ಕಾರೇಹಳ್ಳಿ, ಭದ್ರಾವತಿ.
 10. ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಕಾರೇಹಳ್ಳಿ, ಭದ್ರಾವತಿ.
 11. ಜ್ಞಾನಶ್ರೀ ವಿದ್ಯಾಸಂಸ್ಥೆ, ದೊಡ್ಡಗೊಪ್ಪೇನಹಳ್ಳಿ ಭದ್ರಾವತಿ.
 12. ಬಿಜಿಎಸ್ ಕುವೆಂಪು ಶಾಲೆ ಶಂಕರಘಟ್ಟ, ಬಿಆರ್‍ಪಿ, ಭದ್ರಾವತಿ.
 13. ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನ, ಕುಮುಟ.
 14. ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜು, ಗುರುಪುರ.
 15. ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜು, ಬೈಪಾಸ್ ರಸ್ತೆ , ಭದ್ರಾವತಿ.

ಶಿವಮೊಗ್ಗ ಜಿಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆಯ ಜನರಿಗೆ  ಅನುಕೂಲವಾಗುವಂತೆ ಸಾಕಷ್ಟು ಸಮಾಜಮುಖಿ ಕಾರ್ಯಗಳು ಸಹ ಶ್ರೀ ಮಠದ ಶಿವಮೊಗ್ಗ  ಶಾಖೆಯಿಂದ ನಡೆಯುತ್ತಿವೆ. ಸಾಮೂಹಿಕ ವಿವಾಹ, ಚುಂಚಾದ್ರಿ ಕಲೋತ್ಸವ,  ಮಕ್ಕಳ ಸಾಹಿತ್ಯ ಸಮ್ಮೇಳನಗಳು, ರಸಪ್ರಶ್ನೆ, ವಿಜ್ಞಾನ ವಸ್ತು    ಪ್ರದರ್ಶನ,  ಮಹಿಳಾ ಜಾಗೃತಿ ಮತ್ತು ತರಭೇತಿ ಶಿಬಿರ, ಶಾಲಾಕಾಲೇಜುಗಳಲ್ಲಿ  ವ್ಯಾಸಂಗ ಮಾಡುವ ಯುವ ಜನತೆ ತಮ್ಮ ಬೇಸಿಗೆ ರಜಾದಿನಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಹ ಬೇಸಿಗೆ ಶಿಬಿರಗಳನ್ನು, ಆಯೋಜಿಸಲಾಗುತ್ತಿದೆ. ಕಲುಷಿತಗೊಳ್ಳುತ್ತಿರುವ ಸಮಾಜವನ್ನು ಸರಿಪಡಿಸಬೇಕಾದರೆ ಧರ್ಮಾಧಾರಿತ ಜೀವನ ಜಾರಿಗೆ ಬರಬೇಕು, ಎಂಬ ಕಾರಣಕ್ಕಾಗಿ ವೇದ, ಆಗಮ, ಉಪನಿಷತ್‍ಗಳನ್ನೊಳಗೊಂಡ, ಸಂಸ್ಕøತ ಪಾಠಶಾಲೆಗಳು, ಅಧ್ಯಾತ್ಮ ಶಿಬಿರಗಳನ್ನು ನಡೆಸುತ್ತಾ ನೈತಿಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಭಾರತೀಯ ವೈದ್ಯಪದ್ಧತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನಾಟಿವೈದ್ಯ ಸಮಾವೇಶವನ್ನು, ಯೋಗಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ.

ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿಯವರ ಜನ್ಮದಿನವಾದ ಡಿಸೆಂಬರ್ 8 ಕೇವಲ ಹಾರ ತುರಾಯಿಗಳ ಅಭಿನಂದನೆಗಳ ಸುರಿಮಳೆ ಆಗಿರುವುದಿಲ್ಲ ಅದೊಂದು ಸಾಂಸ್ಕøತಿಕ ವೈಜ್ಞಾನಿಕ ಸಮಾವೇಶವಾಗಿರುತ್ತದೆ. ಪೂಜ್ಯರು ಕ್ರಮಿಸಬಹುದಾದ ಸೇವಾಪಥವನ್ನು ಕೇವಲ ಮೂರು ದಶಕದಲ್ಲಿ ಕ್ರಮಿಸುತ್ತಾ ಬಂದಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರ ಶಿವಮೊಗ್ಗ, ಗುರುಪುರ, ಕುಮುಟ, ಬಿಆರ್‍ ಪಿ , ಭದ್ರಾವತಿ, ಕಾರೇಹಳ್ಳಿ, ಎದ್ದುನಿಂತಿರುವ ಬೃಹತ್ ಕಟ್ಟಡಗಳು, ಕಲ್ಯಾಣ ಮಂಟಪ, ಸುಸಜ್ಜಿತವಾದ ಗ್ರಂಥಾಲಯ, ಪ್ರಯೋಗಾಲಯಗಳು, ಗೋಶಾಲೆಗಳು, ಸುತ್ತಲಿನ ಹಸಿರಿನ ಉದ್ಯಾನವನಗಳು, ಸಾವಿರಾರು ಶಿಕ್ಷಕವೃಂದ, ವಿದ್ಯಾರ್ಥಿವೃಂದವೇ ಇದಕ್ಕೆ ಸಾಕ್ಷಿಯಾಗಿದೆ.  ಪರಮಪೂಜ್ಯರು ಸಮಾಜದ ಉನ್ನತಿಗಾಗಿ ಶ್ರಮಿಸಲೆಂದು ಸಂನ್ಯಾಸಿ ಪರಂಪರೆಯನ್ನು ಸೃಷ್ಟಿಸಿದರು. ತಮ್ಮಿಂದ ದೀಕ್ಷಾಬದ್ಧರಾದ ಶಿಷ್ಯರಿಗೆಲ್ಲ ಧರ್ಮ ಸಂಸ್ಕøತಿಯ ರಕ್ಷಕರಾಗಿ ಸಮಾಜ ಸೇವೆಯನ್ನು ಮಾಡುವುದರಲ್ಲಿ ಭಗವತ್ಸಾಕ್ಷಾತ್ಕಾರವನ್ನು ಹೊಂದಿರೆಂದು ಬೋಧಿಸಿ ಜನಪರ ಕಾಳಜಿಯ ಸಂಸ್ಕಾರವನ್ನು ಮೈಗೂಡಿಸಿದ್ದಾರೆಂಬುದಕ್ಕೆ ಸಾಕ್ಷಿಯೇ ಪೂಜ್ಯ ಶ್ರೀ ಶ್ರೀ ಗಳ ಜೀವನಶೈಲಿ.

ಶಿವಮೊಗ್ಗ ಶಾಖಾಮಠದಿಂದ ನಡೆಸಲ್ಪಡುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಫಲಿತಾಂಶ ನೀಡುತ್ತಾ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿರುವುದಲ್ಲದೆ, ಚುಂಚಾದ್ರಿ ಕಪ್ ರಾಜ್ಯಮಟ್ಟದಲ್ಲಿ ಹಮ್ಮಿಕ್ಕೊಳ್ಳಲಾಗುತ್ತಿದೆ. ಈ ಮೂಲಕ  ಕ್ರೀಡಾಲೋಕಕ್ಕೆ ಅತ್ಯುತ್ತಮ ಪ್ರತಿಭೆಗಳು ಆದಿಚುಂಚನಗಿರಿ ವಿದ್ಯಾಸಂಸ್ಥೆಯಿಂದ ಪ್ರತಿವರ್ಷವು ಸೇರ್ಪಡೆಯಾಗುತ್ತಿದ್ದಾರೆ. ಸ್ವತಃ ಸ್ವಾಮೀಜಿಯವರೇ ಕ್ರೀಡಾಭಿಮಾನಿಗಳಾಗಿದ್ದು ಪ್ರತಿಯೊಂದು ಕ್ರೀಡೆಗೂ ಸಹ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಪ್ರತಿವರ್ಷವೂ ಸಹ ಆಚರಿಸುವ ರಾಷ್ಟ್ರೀಯಹಬ್ಬಗಳು ನಾಡಹಬ್ಬಗಳು ಹೋಮ-ಹವನಗಳು, ಜನ್ಮಜಯಂತಿಗಳನ್ನು ಸಂಭ್ರಮದಿಂದ ಆಚರಿಸುವುದಲ್ಲದೆ ಅರ್ಥಪೂರ್ಣವಾದ ಸಂದೇಶಗಳನ್ನು  ವಿದ್ಯಾರ್ಥಿಗಳಿಗೆ ತಲುಪಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.

ಈ ಮೇಲಿನ ಎಲ್ಲಾ ಸಾಧನೆಗಳೊಂದಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯು ತನ್ನ 29ನೇ ವಾರ್ಷಿಕೋತ್ಸವವನ್ನು ದಿನಾಂಕ 04-11-2019 ಮತ್ತು 05-11-2019 ರಂದು ಧರ್ಮ ಸಂಕಥನ ಹಾಗೂ ಭಗವತ್ ಚಿಂತನಾ ಶಿಬಿರ ಆಯೋಜಿಸುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡಿತು.   ಈ ಶಿಬಿರದಲ್ಲಿ ದೇಶದ ಪ್ರಮುಖ ಧರ್ಮಗಳು, ಭಗವದ್ಗೀತೆ, ಜ್ಯೋತಿಷ್ಯ ಈ ಮುಂತಾದ ವಿಷಯಗಳ ಬಗ್ಗೆ ವಿಶೇಷ ಸತ್ರಗಳನ್ನು ಆಯೋಜಿಸಿ ಈ ಎರಡೂ ದಿನಗಳೂ ಅರ್ಥಪೂರ್ಣವಾಗಿ ನಡೆಯಲು  ಪೂಜ್ಯರ ಮಾರ್ಗದರ್ಶನ ಎದ್ದುಕಾಣುತ್ತಿತ್ತು.

ಪೂಜ್ಯ ಶ್ರೀ ಶ್ರೀ ಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾಗಿ  ನಾಲ್ಕು ವರ್ಷಗಳು ಕಳೆದಿದ್ದು, ಪರಮಪೂಜ್ಯ ಜಗದ್ಗುರುಗಳಾದ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ  ಶ್ರೀ ಮಠದ ಎಲ್ಲಾ ಕಾರ್ಯ ಚಟುವಟಿಕೆಗಳು ಯಶಸ್ವಿಯಾಗಿ ನಿರ್ವಹಿಸುತ್ತಾ ಮಠದ ಉನ್ನತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳಾಗಿ ಹೆಚ್ಚು ಕಾರ್ಯಭಾರಗಳ ಹೊರೆಯಿಂದಾಗಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿದ್ದರು ಶಿವಮೊಗ್ಗ ಶಾಖಾ ಮಠದ ಯಾವ ಕಾರ್ಯವನ್ನು ಕಡೆಗಣಿಸುವುದಿಲ್ಲ. ಎಲ್ಲಾ ಆಗುಹೋಗುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಮುನ್ನಡೆಯುತ್ತಿರುವ ಪೂಜ್ಯರಿಗೆ ಜನುಮದಿನದ ಹಾರ್ಧಿಕ ಶುಭಾಶಯ ಕೋರುತ್ತಾ ಕ್ಷೇತ್ರಾಧಿ ದೇವತೆಗಳು ಆರೋಗ್ಯ, ಆಯಸ್ಸು , ಯಶಸನ್ನು ನೀಡಿ ಹರಸಲಿ. ಪೂಜ್ಯ ಶ್ರೀ ಶ್ರೀ ಗಳ ಆಶೀರ್ವಾದ ಸರ್ವರಿಗೂ ಲಭಿಸಲಿ.

 

ಲೇಖಕರು -ಡಾ.ಹರಿಣಾಕ್ಷಿ ಎಸ್

 

 

 

 

 

 

 

Related posts

ಬದುಕಿನಲ್ಲಿ ಉತ್ತಮ‌ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕಿದೆ – ಸಾಹಿತಿ ರವಿ ಸಸಿತೋಟ ಅಭಿಪ್ರಾಯಪಟ್ಟರು.

Times fo Deenabandhu

ಕೇಂಧ್ರ ಗಾಮೀಣಾಭಿವೃದ್ಧಿ ಸಚಿವರೊಂದಿಗೆ ವಿಡಿಯೊ ಕಾನ್ಫರೆನ್ಸ್ ನರೇಗಾ ಮಾನವ ದಿನ ಸೃಷ್ಟಿಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನ: ಸಚಿವ ಕೆ.ಎಸ್.ಈಶ್ವರಪ್ಪ

Times fo Deenabandhu

ಇಂಗ್ಲಿಷ್ ಎಂಬ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವುದು ಅಪಾಯಕಾರಿ