Times of Deenabandhu
  • Home
  • ಕ್ರೈಮ್
  • ಬೆಳಗಾವಿಯಲ್ಲೂ ನಡೆದಿತ್ತು ಹೈದರಾಬಾದ್‌ ಮಾದರಿ ಎನ್‌ಕೌಂಟರ್‌
ಕ್ರೈಮ್ ಮುಖ್ಯಾಂಶಗಳು ರಾಜ್ಯ

ಬೆಳಗಾವಿಯಲ್ಲೂ ನಡೆದಿತ್ತು ಹೈದರಾಬಾದ್‌ ಮಾದರಿ ಎನ್‌ಕೌಂಟರ್‌

ಬೆಳಗಾವಿ: ಹೈದರಾಬಾದ್‌ ಪಶುವೈದ್ಯೆ ಮೇಲೆ ಅತ್ಯಾಚಾರಗೈದ ನಾಲ್ವರು ಆರೋಪಿಗಳನ್ನು ಕೊಲೆ ಮಾಡಿದ ಸ್ಥಳದಲ್ಲೇ ಎನ್‌ಕೌಂಟರ್‌ ಮಾಡಲಾಗಿದೆ. ಇದೇ ಮಾದರಿಯಲ್ಲಿ ಬೆಳಗಾವಿಯಲ್ಲೂಈ ಹಿಂದೆ ಒಂದು ಎನ್‌ಕೌಂಟರ್‌ ನಡೆದಿತ್ತು. ಅದರ ನೇತೃತ್ವ ವಹಿಸಿದ್ದವರು ಅಂದಿನ ಬೆಳಗಾವಿ ಎಸ್‌ಪಿ ಹೇಮಂತ್‌ ನಿಂಬಾಳ್ಕರ್‌.
2007ರ ಸೆ. 6ರಂದು ಬೆಳಗಾವಿ ನಗರದ ಗಣೇಶಪುರದ ಬಂಗಲೆಯಲ್ಲಿ ನಡೆದ ಈ ಎನ್‌ಕೌಂಟರ್‌ನಲ್ಲಿ ಕೊಲೆ, ಅತ್ಯಾಚಾರ, ಸುಲಿಗೆ ಸೇರಿದಂತೆ 38ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಹತನಾಗಿದ್ದ.

ಏನಿದು ಪ್ರಕರಣ?

2007ರ ಆಗಸ್ಟ್‌ ತಿಂಗಳಲ್ಲಿ ಗಣೇಶಪುರದ ಬಂಗಲೆಯೊಂದರಲ್ಲಿ ಶೀತಲ್‌ ಚೌಗುಲೆ ಎನ್ನುವ ವಿವಾಹಿತೆ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದ ದುರುಳರು, ನಂತರ ಖಾನಾಪುರ ಬಳಿ ನಾಲಾದಲ್ಲಿ ಶವ ಬಿಸಾಡಿ ಹೋಗಿದ್ದರು. ಪ್ರಕರಣ ಭೇದಿಸಿದ್ದ ಪೊಲೀಸರ ವಿಶೇಷ ತಂಡ ತಲೆಮರೆಸಿಕೊಂಡಿದ್ದ ಆರೋಪಿ ಪ್ರವೀಣ್‌ ಶಿಂತ್ರೆಯನ್ನು ಉಡುಪಿಯಲ್ಲಿ ಬಂಧಿಸಿ ಬೆಳಗಾವಿಗೆ ಕರೆತಂದಿದ್ದರು.

ಪ್ರವೀಣ್‌ ಶಿಂತ್ರೆಯನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆತ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದ. ಪೊಲೀಸರ ಮೇಲೆ ಗುಂಡಿನ ದಾಳಿ ಕೂಡ ನಡೆಸಿದ್ದ. ತಕ್ಷಣ ಪ್ರತಿ ದಾಳಿ ನಡೆಸಿದ್ದ ಹೇಮಂತ್‌ ನಿಂಬಾಳ್ಕರ್‌ ಮತ್ತು ತಂಡ ಆತನನ್ನು ಎನ್‌ಕೌಂಟರ್‌ ಮಾಡಿ ಬಲಿ ಪಡೆದಿತ್ತು.
ಅಂದು ಎನ್‌ಕೌಂಟರ್‌ ನಡೆಸಿದ್ದ ಎಸ್ಪಿ ಹೇಮಂತ್‌ ನಿಂಬಾಳ್ಕರ್‌ ಇಂದು ಐಜಿಯಾಗಿದ್ದರೆ, ವಿಶೇಷ ಕಾರ್ಯಾಚರಣೆ ತಂಡದಲ್ಲಿದ್ದ ಎನ್‌.ವಿ. ಭರಮನಿ, ಮಹಾಂತೇಶ್ವರ ಜಿದ್ದಿ, ಶಂಕರ್‌ ಮಾರಿಹಾಳ ಎಸಿಪಿ, ಡಿವೈಎಸ್ಪಿಗಳಾಗಿದ್ದಾರೆ.

ಸ್ತಬ್ಧವಾಗಿತ್ತು ಬೆಳಗಾವಿ

ಶೀತಲ್‌ ಚೌಗುಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿಇಡೀ ಬೆಳಗಾವಿ ಜನ ಸಿಡಿದೆದ್ದಿದ್ದರು. ಕೃತ್ಯ ಖಂಡಿಸಿ ಬೆಳಗಾವಿ ಬಂದ್‌ಗೆ ಕರೆ ಕೊಟ್ಟಾಗ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರೇ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣ ಇಂದಿಗೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಅಳಿಯನೇ ಸುಪಾರಿ ನೀಡಿ ಹತ್ಯೆ ನಡೆಸಿದ್ದಾಗಿ ಶೀತಲ್‌ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಶೀತಲ್‌ ಪತಿ, ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದ ಗುತ್ತಿಗೆದಾರ ರವೀಂದ್ರ ಚೌಗುಲೆ ಸೇರಿದಂತೆ ಏಳು ಆರೋಪಿಗಳ ವಿರುದ್ಧ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಈ ತೀರ್ಪು ಪ್ರಶ್ನಿಸಿದ್ದ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿ ನಿರ್ದೋಷಿಗಳಾಗಿ ಬಿಡುಗಡೆಗೊಂಡಿದ್ದರು.

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಶೀತಲ್‌ ತಾಯಿ ಮತ್ತು ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು, ಇಂದಿಗೂ ವಿಚಾರಣೆ ನಡೆಯುತ್ತಿದೆ.

Related posts

ನಮ್ಮ ಮೆಟ್ರೊದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ತಾಕೀತು

Times fo Deenabandhu

ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿದ ಕೈ ನಾಯಕರು…..

20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜ್‌ : ಹೊಸ ರೂಪದೊಂದಿಗೆ ಲಾಕ್ ಡೌನ್ 4.0 – ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ